ಚಿತ್ರದುರ್ಗ: ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭಂಡಾಸುರ ಹಾಗೂ ಮಂಡಾಸುರರು ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗದ ಎಂಎಲ್‍ಸಿ ಚುನಾವಣಾ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 400 ಲೋಕಸಭೆ ಸದಸ್ಯರಿದ್ದ ಕಾಂಗ್ರೆಸ್ ಈಗ 50ಕ್ಕೆ ತಲುಪಿದೆ. ಇಂತಹ ವೇಳೆ ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಬಂಡಾಸುರ ಡಿಕೆಶಿ ಹೇಳಿದ್ದಾರೆಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೀಯಾಳಿಸಿ ದೊಡ್ಡವಾರಾಗಬಹುದೆಂದು ಭಾವಿಸಿರುವ ಸಿದ್ದರಾಮಯ್ಯ ಹಾಗು ಡಿಕೆಶಿ ಎಂಬ ಭಂಡಾಸುರ ಮತ್ತು ಮಂಡಾಸುರರು ದೊಡ್ಡ ದೊಡ್ಡ ಮಾತು ಆಡುತ್ತಿದ್ದಾರೆ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆಂದು ಕುಟುಕಿದರು. ಇದನ್ನೂ ಓದಿ: ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ- ಅಶೋಕ್
ಇದೇ ವೇಳೆ ಮುರುಗೇಶ್ ನಿರಾಣಿ ಸಿಎಂ ಆಗುತ್ತಾರೆಂದಿರುವ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಅವರು, ಈ ಬಗ್ಗೆ ನಾನು ಮಾತಾಡಲ್ಲ. ಇದರ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಜಾರಿಕೊಂಡರು. ಜೊತೆಗೆ ರಾಜ್ಯದಲ್ಲಿ ಬಾರಿ ಸದ್ದು ಮಾಡ್ತಿರುವ ಬಿಟ್ ಕಾಯಿನ್ ಬಗ್ಗೆ ಭಂಡಾಸುರ, ಮಂಡಾಸುರರ ಬಳಿ ದಾಖಲೆ ಇಲ್ಲ. ಆದರೆ ನಮ್ಮ ಬುಟ್ಟಿಯಲ್ಲಿ ಹಾವಿದೆ ಎಂದು ಬಿಟ್ ಕಾಯಿನ್ ಬಗ್ಗೆ ಮಾತಾಡುತ್ತಿದ್ದಾರೆಂದು ಹೇಳಿದರು.
ಬಿಜೆಪಿ ಪಕ್ಷದಲ್ಲಿ ಯಾವುದೇ ಕಚ್ಚಾಟ ಇಲ್ಲ. ನಮ್ಮಲ್ಲಿ ಒಗ್ಗಟ್ಟಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಕಚ್ಚಾಟ ಇದೆ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದು, ಸಿಎಂ ಆಗಬೇಕೆಂದು ಭಂಡಾಸುರ ಹಾಗು ಮಂಡಾಸುರರ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಜನಪದರ ಬಾಯಲ್ಲಿ ಹಾಡಾದ ಪುನೀತ್ – ತಾಯಂದಿರ ಕಣ್ಣಲ್ಲಿ ನೀರು ತರಿಸ್ತಿದೆ ಹಾಡು
ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಹರಡುವ ಭೀತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇನ್ನು ಮುಂದೆ ಜೀವನದಲ್ಲಿ ಅನೇಕ ಕಾಯಿಲೆ ಬರಬಹುದು. ರಾಜ್ಯಕ್ಕೆ ಓಮಿಕ್ರಾನ್ ಅಥವಾ ಬೇರೆ ಯಾವುದೇ ಕಾಯಿಲೆ ಬರಬಹುದು. ಅದು ಮಾನವ ಸೃಷ್ಟಿ ಅಥವಾ ನ್ಯಾಚುರಲ್ ವೈರಸ್ ಇರಬಹುದು. ಈ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಆದರೆ ಸರ್ಕಾರದ ನಿಯಮಗಳನ್ನು ಜನರು ಜಾಗೃತಿಯಿಂದ ಪಾಲಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಶಾಸಕರಾದ ತಿಪ್ಪಾರೆಡ್ಡಿ, ಚಂದ್ರಪ್ಪ ಶ್ರೀರಾಮುಲು ಅವರ ಜೊತೆಗಿದ್ದರು.