ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಇಡಿ ಹೊಸ ಆರೋಪ ಮಾಡಿದ್ದು, 20 ದೇಶಗಳಲ್ಲಿ ವಿವಿಧ ಅಕೌಂಟ್ ಗಳ ಮೂಲಕ ಡಿಕೆಶಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಹೇಳಿದೆ.
ಇಂದು ಇಡಿ ಕಸ್ಟಡಿಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಈ ವೇಳೆ ಅಧಿಕಾರಿಗಳು ವಿಚಾರಣೆಗಾಗಿ ಕಸ್ಟಡಿಯ ಅವಧಿಯನ್ನು ವಿಸ್ತರಣೆ ಮಾಡಲು ಮನವಿ ಮಾಡಿದ್ದರು. ನ್ಯಾಯಾಲಯ ಸೆ.17ರ ವರೆಗೂ ಕಸ್ಟಡಿಗೆ ನೀಡಿತು.
Advertisement
Advertisement
ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಇಡಿ ಪರ ವಕೀಲರು ಡಿಕೆಶಿ ಅವರ ವಿರುದ್ಧ ಆರೋಪಗಳ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು. 20 ದೇಶಗಳಲ್ಲಿ ಡಿಕೆ ಶಿವಕುಮಾರ್ ಅವರು 317 ಅಕೌಂಟ್ ಹೊಂದಿದ್ದು, 200 ಕೋಟಿ ರೂ. ಕಪ್ಪು ಹಣ ಚಲಾವಣೆಯಾಗಿದೆ. 800 ಕೋಟಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.
Advertisement
ನ್ಯಾಯಾಲಯದ ಆದೇಶದ ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ಇದುವರೆಗೂ ಡಿಕೆ ಶಿವಕುಮಾರ್ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿರುವ ಆಸ್ತಿ ವಿವರಗಳನ್ನೇ ಮುಂದಿಟ್ಟು ಆರೋಪ ಮಾಡಿದ್ದಾರೆ. ಆ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
Advertisement
ಇದೇ ವೇಳೆ 317 ಖಾತೆಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗ ಅವರು ಅಷ್ಟು ಖಾತೆಗಳಲ್ಲಿ ಇರುವ ಹಣವನ್ನು ನೀಡಿದರೆ ಸಂತೋಷ ಪಡುತ್ತೇವೆ ಎಂದು ಆರೋಪಗಳ ವಿರುದ್ಧ ವ್ಯಂಗ್ಯವಾಡಿದರು.
ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಮಾಡಲಾಗುತಿದೆ. ಆದ್ದರಿಂದಲೇ ಅವರ ಮೇಲೆ ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ಒತ್ತಡಕ್ಕೆ ಒಳಗಾಗಿ ಈ ರೀತಿ ಮಾಡಲಾಗುತ್ತಿದೆ. ಯಾರದ್ದೋ ಆಸ್ತಿ ಹೊಂದಿದ್ದರೆ ಅದನ್ನು ನಮ್ಮದೇ ಎಂದು ಆರೋಪ ಮಾಡುತ್ತಿದ್ದಾರೆ ಅಷ್ಟೇ. ಕಾನೂನಿನ ಮೇಲೆ ಗೌರವ ಇದ್ದು, ಕಾನೂನು ಹೋರಾಟ ಮುಂದುವರಿಸುವ ಮೂಲಕ ಜಯ ಪಡೆಯುತ್ತೇವೆ. ಡಿಕೆ ಶಿವಕುಮಾರ್ ಕೂಡ ತಮ್ಮ ಬೆಂಬಲಿಗರಿಗೆ ಸಂದೇಶ ನೀಡಿದ್ದು, ಈ ಹೋರಾಟದಲ್ಲಿ ಗೆದ್ದು ಬರುವುದಾಗಿ ಹೇಳಿದ್ದಾರೆ. ಆದ್ದರಿಂದ ಯಾರು ದೆಹಲಿಗೆ ಬರುವ ಪ್ರಯತ್ನವನ್ನು ಮಾಡಬೇಡಿ ಎಂದು ಮನವಿ ಮಾಡಿದರು.