ನವದೆಹಲಿ: ಸೆಲ್ಫಿ ಕ್ಲಿಕ್ಕಿಸಲು ಬಂದಿದ್ದ ಅಭಿಮಾನಿಯ ಕೈಗೆ ಸಂಸದ ಡಿಕೆ ಸುರೇಶ್ ಏಟು ಕೊಟ್ಟಿರುವ ಘಟನೆ ಇಂದು ಕೋರ್ಟ್ ಆವರಣದಲ್ಲಿ ನಡೆಯಿತು.
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಮತ್ತೆ ಇಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿತ್ತು. ಈ ವೇಳೆ ಕೋರ್ಟ್ ಕಲಾಪ ಪೂರ್ಣಗೊಳಿಸಿ ಹೊರ ಬಂದ ಡಿಕೆ ಸುರೇಶ್ ಬೆಂಬಲಿಗರನ್ನು ಭೇಟಿ ಮಾಡುತ್ತಿದ್ದರು. ಈ ಸಮಯದಲ್ಲಿ ಅಭಿಮಾನಿಯೊಬ್ಬ ಮೊಬೈಲ್ ಹಿಡಿದು ಡಿಕೆ ಸುರೇಶ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಇದರಿಂದ ತಾಳ್ಮೆ ಕಳೆದುಕೊಂಡ ಸಂಸದರು ಅಭಿಮಾನಿಯ ಕೈಗೆ ಏಟು ಕೊಟ್ಟರು. ಪರಿಣಾಮ ಅಭಿಮಾನಿಯ ಮೊಬೈಲ್ ಕೆಳಕ್ಕೆ ಬಿತ್ತು. ಇದರಿಂದ ವಿಚಲಿತನಾದ ಅಭಿಮಾನಿ ಮೊಬೈಲ್ ತೆಗೆದುಕೊಂಡು ದೂರಸರಿದ.
Advertisement
Advertisement
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಸುರೇಶ್ ಅವರು, ಡಿಕೆ ಶಿವಕುಮಾರ್ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಇದುವರೆಗೂ ಕೇಳಿಬಂದಿಲ್ಲ. ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿರುವ ಆಸ್ತಿ ವಿವರಗಳನ್ನೇ ಮುಂದಿಟ್ಟು ಇಡಿ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಆ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ಇದೇ ವೇಳೆ 317 ಖಾತೆಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗ ಅವರು ಅಷ್ಟು ಖಾತೆಗಳಲ್ಲಿ ಇರುವ ಹಣವನ್ನು ನೀಡಿದರೆ ಸಂತೋಷ ಪಡುತ್ತೇವೆ ಎಂದು ಆರೋಪಗಳ ವಿರುದ್ಧ ವ್ಯಂಗ್ಯವಾಡಿದರು. ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಆದ್ದರಿಂದಲೇ ಅವರ ಮೇಲೆ ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ಒತ್ತಡಕ್ಕೆ ಒಳಗಾಗಿ ಈ ರೀತಿ ಆರೋಪ ಮಾಡಿದ್ದಾರೆ. ಯಾರದ್ದೋ ಆಸ್ತಿ ಹೊಂದಿದ್ದರೆ ಅದನ್ನು ನಮ್ಮದೇ ಎಂದು ಆರೋಪ ಮಾಡುತ್ತಿದ್ದಾರೆ ಅಷ್ಟೇ. ಕಾನೂನಿನ ಮೇಲೆ ಗೌರವ ಇದ್ದು, ಕಾನೂನು ಹೋರಾಟ ಮುಂದುವರಿಸುವ ಮೂಲಕ ಜಯ ಪಡೆಯುತ್ತೇವೆ ಎಂದರು.