– ಸಚಿವರೇ ಅಧಿಕಾರಿಗಳ ಮಾತು ಕೇಳಬೇಡಿ, ಸುಳ್ಳು ಮಾಹಿತಿ ನೀಡ್ತಿದ್ದಾರೆ
– ಸುಳ್ಳು ಮಾಹಿತಿ ಕೊಡಬೇಡಿ ಅಧಿಕಾರಿಗಳ ವಿರುದ್ಧ ಗರಂ
ರಾಮನಗರ: ಸರ್ಕಾರವೇ ರೈತರಿಂದ ತರಕಾರಿ ಕೊಂಡು ಹಾಪ್‍ಕಾಮ್ಸ್, ಹಾಲು ಒಕ್ಕೂಟಗಳ ಮೂಲಕ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಂಸದ ಡಿ.ಕೆ.ಸುರೇಶ್ ಅವರು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಒತ್ತಾಯಿಸಿದ್ದಾರೆ.
ರಾಮನಗರ ಜಿಲ್ಲಾ ಪಂಚಾಯತ್‍ನಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಮಾರುಕಟ್ಟೆ ಹಾಗೂ ನೆರವು ಯಾವ ರೀತಿಯಲ್ಲಿ ನೀಡಲಾಗುತ್ತಿದೆ ಎಂದು ಚರ್ಚೆ ನಡೆಸಲಾಯಿತು. ಚರ್ಚೆಯ ವೇಳೆ ರೈತರಿಂದ ತರಕಾರಿ ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಅಧಿಕಾರಿಗಳ ಮಾತಿಗೆ ಗರಂ ಆದ ಡಿ.ಕೆ.ಸುರೇಶ್, ಸುಖಾಸುಮ್ಮನೆ ಸಚಿವರ ಮುಂದೆ ಸುಳ್ಳು ಮಾಹಿತಿ ಕೊಡಬೇಡಿ ಎಂದು ಗದರಿದರು.
Advertisement
Advertisement
ಎಪಿಎಂಸಿಗಳಲ್ಲಿ ಬೆಳೆಗಳು ಸರಿಯಾಗಿ ಮಾರಾಟ ಆಗುತ್ತಿಲ್ಲ. ಹೊಲದ ಕೆಲಸಗಳಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಬೇರೆ ಊರುಗಳಿಂದ ಕಾರ್ಮಿಕರು ಬರಲು ಅಧಿಕಾರಿಗಳು, ಪೊಲೀಸರು ಬಿಡುತ್ತಿಲ್ಲ. ಹೀಗಾಗಿ ಬೆಳೆಗಳನ್ನು ಕಟಾವು ಮಾಡಲು ಆಗದ ಪರಿಸ್ಥಿತಿ ಇದೆ. ರೈತರಿಗಾಗಿ ವಿಶೇಷ ಪ್ಯಾಕೇಜ್ ರೂಪಿಸಿದಾಗ ಮಾತ್ರ ಮತ್ತೆ ಕೃಷಿ ಮಾಡಲು ಸಾಧ್ಯ ಎಂದು ತಿಳಿಸಿದರು.
Advertisement
ಬೆಂಬಲ ಬೆಲೆಯಡಿ ಸರ್ಕಾರದಿಂದ ರಾಗಿ ಖರೀದಿ ಅವಧಿಯನ್ನು ವಿಸ್ತರಣೆ ಮಾಡಬೇಕು. ಒಬ್ಬರಿಂದ 15 ಕ್ವಿಂಟಲ್ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದ್ದು, ಅದನ್ನು ಹೆಚ್ಚಿಸಬೇಕು. ಹೆಚ್ಚುವರಿಯಾಗಿ ಬೆಳೆದ ರಾಗಿಯನ್ನೂ ಬೆಂಬಲ ಬೆಲೆ ಅಡಿ ಖರೀದಿ ಮಾಡಬೇಕು. ಅಲ್ಲದೆ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕಾರ್ಮಿಕರಿಗೆ ಹಣ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇದರಿಂದ ಪ್ರತಿ ರೈತನಿಗೆ 4-5 ಸಾವಿರ ಸಿಗುತ್ತದೆ ಎಂದರು.
Advertisement
ಇದೇ ವೇಳೆ ಪರಿಷತ್ ಸದಸ್ಯ ಅ.ದೇವೇಗೌಡ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಸರ್ಕಾರ ಅದನ್ನು ಭರ್ತಿ ಮಾಡಬೇಕು. ಗ್ರಾ.ಪಂ. ಮಟ್ಟದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಬೇಕು. ಎರಡು ವರ್ಷಗಳಿಂದ ರೈತರಿಗೆ ಟ್ರಾಕ್ಟರ್ ಖರೀದಿ ಸಬ್ಸಿಡಿ ಹಣ ಸ್ಥಗಿತಗೊಂಡಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.