ನವದೆಹಲಿ: ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಾಯಿ ಹಾಗೂ ಪತ್ನಿಯ ಅರ್ಜಿ ವಿಚಾರಣೆ ನವೆಂಬರ್ 4ಕ್ಕೆ ಮುಂದೂಡಿಕೆಯಾಗಿದೆ.
ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ದೆಹಲಿ ಹೈಕೋರ್ಟಿನಲ್ಲಿ ಇಂದು ವಿಚಾರಣೆಗೆ ಬಂದಿತ್ತು. ಹೀಗಾಗಿ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಇದೀಗ ವಿಚಾರಣೆಯನ್ನು ಮುಂದೂಡಿದೆ.
Advertisement
Advertisement
ವಿಚಾರಣೆಯ ವೇಳೆ ಗೌರಮ್ಮ ಪರ ವಕೀಲರು ಬೆಂಗಳೂರಿನಲ್ಲಿ ವಿಚಾರಣೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಈ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಇದುವರೆಗೂ ಯಾವುದೇ ಸಮನ್ಸ್ ಸಿಕ್ಕಿಲ್ಲ ಎಂದು ಡಿಕೆಶಿ ಪತ್ನಿ, ತಾಯಿ ಗೌರಮ್ಮ ಪರ ವಕೀಲರು ತಿಳಿಸಿದರು. ಈ ವೇಳೆ ಜಡ್ಜ್, ಹೊಸ ಸಮನ್ಸ್ ನೀಡಿ ಎಂದಾಗ ಇಡಿ ಪರ ವಕೀಲರು ಈಗಾಗಲೇ ಸಮನ್ಸ್ ನೀಡಲಾಗಿದ್ದು, ಹೊಸ ಸಮನ್ಸ್ ಅವಶ್ಯಕತೆ ಇಲ್ಲ ಎಂದಿದ್ದಾರೆ. ಹಾಗಾದ್ರೆ ಸ್ವಲ್ಪ ಕಾಯಿರಿ. ಸಮನ್ಸ್ ತಲುಪಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದು, ವಿಚಾರಣೆ ನ.4ಕ್ಕೆ ಮುಂದೂಡಿದರು.
Advertisement
Advertisement
ಈ ಹಿಂದೆ ಅಕ್ಟೋಬರ್ 17 ಕ್ಕೆ ವಿಚಾರಣೆ ಬರುವಂತೆ ಡಿಕೆ ತಾಯಿ ಮತ್ತು ಮಡದಿಗೆ ಇಡಿಯಿಂದ ಸಮನ್ಸ್ ನೀಡಲಾಗಿತ್ತು. ಆದರೆ ಸಮನ್ಸ್ ರದ್ದು ಮಾಡಬೇಕು, ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕು ಅಂತ ಕೋರಿ ಡಿಕೆಶಿ ಪತ್ನಿ ಮತ್ತು ತಾಯಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಇಂದಿಗೆ ವಿಚಾರಣೆ ನಿಗದಿ ಮಾಡಿತ್ತು. ಅಲ್ಲದೆ 7 ದಿನಗಳ ಕಾಲ ಸಮನ್ಸ್ ನೀಡದಂತೆ ಇಡಿಗೆ ಸೂಚನೆ ನೀಡಿತ್ತು. ಈಗಾಗಲೇ 7 ದಿನ ಕಳೆದಿರುವ ಹಿನ್ನೆಲೆಯಲ್ಲಿ ನಾಳೆ ವಿಚಾರಣೆ ಬನ್ನಿ ಅಂತ ಡಿಕೆ ತಾಯಿ ಮತ್ತು ಮಡದಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.