ರಾಮನಗರ: ಉಪಚುನಾವಣೆಗೂ ಮೊದಲು ಭಾರೀ ಸುದ್ದಿಯಾಗಿದ್ದ ಕನಕಪುರ ಮೆಡಿಕಲ್ ಕಾಲೇಜು ವಿಚಾರ, ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬರುತ್ತಿದಂತೆ ಕನಕಪುರ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದು ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಡಾ.ಸುಧಾಕರ್ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ನಡುವಿನ ಕಾಳಗಕ್ಕೂ ಕಾರಣವಾಗಿತ್ತು. ಆದರೆ ಇದೀಗ ಡಿಕೆ ಶಿವಕುಮಾರ್ ಮತ್ತೆ ಮೆಡಿಕಲ್ ವಿಚಾರವಾಗಿ ಸಿಡಿದೆದ್ದಿದ್ದು, ಕನಕಪುರ ಮೆಡಿಕಲ್ ಕಾಲೇಜು ರದ್ದುಗೊಳಿಸಿದ ಬಗ್ಗೆ ಮರು ಪರಿಶೀಲನೆ ನಡೆಸಿ ಮರು ಆದೇಶಕ್ಕಾಗಿ ಪಟ್ಟು ಹಿಡಿದು ಶನಿವಾರ ಸಿಎಂಗೆ ಪತ್ರ ಬರೆದಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಪಡಿಸಿರುವ ಅದೇಶವನ್ನು ಹಿಂತೆಗೆದುಕೊಂಡು ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆ ಮರು ಆದೇಶ ಹೊರಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಹೋರಾಟಕ್ಕೆ ಆಸ್ಪದ ನೀಡುವುದಿಲ್ಲವೆಂದು ಸಿಎಂ ಯಡಿಯೂರಪ್ಪರನ್ನ ನಂಬಿರುವುದಾಗಿ ಎಂದು ಶಿವಕುಮಾರ್ ಅವರು ಯಡಿಯೂರಪ್ಪನವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೆಡಿಕಲ್ ಕಾಲೇಜಿಗೆ ಒತ್ತಾಯಿಸಿ ಶನಿವಾರ ಬರೆದ ಪತ್ರದಲ್ಲಿ ಡಿಕೆ ಶಿವಕುಮಾರ್, ಯಡಿಯೂರಪ್ಪನವರಿಗೆ ಅವರ ದಾಟಿಯಲ್ಲಿದೇ ತಿವಿಯುವುದರ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕನಕಪುರದ ಜನತೆಗಾಗಿ ಸರ್ಕಾರ ಕೂಡಲೇ ಕನಕಪುರಕ್ಕೆ ನೀಡಲಾಗಿದ್ದ ಕಾಲೇಜನ್ನು ಮರು ಮಂಜೂರು ಮಾಡಬೇಕು. ಕಾಲೇಜು ಕಟ್ಟಡ ನಿರ್ಮಾಣದ ಭೂಮಿ ಪೂಜೆಗೆ ದಿನಾಂಕ ನಿಗದಿಪಡಿಸಬೇಕು. ಒಂದು ವೇಳೆ ನಿಮ್ಮ ಸರ್ಕಾರ ಈ ವಿಚಾರದಲ್ಲಿ ದ್ವೇಷದ ರಾಜಕಾರಣ ಮುಂದುವರಿಸಿದರೆ ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಕನಕಪುರ ಜನರಿಗೆ ನ್ಯಾಯ ದೊರಕಿಸಿಕೊಡಲು ನನ್ನದೇ ಮಾರ್ಗ ಅನುಸರಿಸಬೇಕಾಗುತ್ತದೆ. ಇದಕ್ಕೆ ನೀವು ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?
‘ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ, ಜನರ ಹಿತದೃಷ್ಟಿ ಹಾಗೂ ಅಭಿವೃದ್ಧಿ ವಿಚಾರವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಯಡಿಯೂರಪ್ಪನವರು ಬಸವ ತತ್ವಗಳನ್ನು ಪಾಲಿಸುವುದಾಗಿ ಹೇಳಿಕೊಳ್ಳುವ ಅವರು ಈ ಹಿಂದೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ಆದರೆ ನಂತರದ ದಿನಗಳಲ್ಲಿ ಅವರು ತಮ್ಮ ಮಾತಿಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕನಕಪುರ ವೈದ್ಯಕೀಯ ವಿಜ್ಞಾನ ಕಾಲೇಜು ಆದೇಶವನ್ನು ರದ್ದುಗೊಳಿಸಿರುವುದು ಮುಖ್ಯಮಂತ್ರಿಗಳು ತಮ್ಮ ಮಾತು ತಪ್ಪಿರುವುದಕ್ಕೆ ಸಾಕ್ಷಿಯಾಗಿದೆ.
ಕಳೆದ ಸರ್ಕಾರ 2018-19ನೇ ಸಾಲಿನ ಬಜೆಟ್‍ನಲ್ಲಿ ಕನಕಪುರ ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡಿತ್ತು. ಈ ವಿಚಾರವಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ನೀವು ನಿಮ್ಮ ಅಭಿಪ್ರಾಯ ಹಾಗೂ ಒಪ್ಪಿಗೆಯನ್ನೂ ಸೂಚಿಸಿದ್ದಿರಿ. ನಂತರ ಯೋಜನಾ ಇಲಾಖೆ, ಆರ್ಥಿಕ ಇಲಾಖೆ, ಕಾನೂನು ಮತ್ತು ಸಂಸದೀಯ ಇಲಾಖೆ ಈ ಪ್ರಸ್ತಾವನೆ ಪರಿಶೀಲಿಸಿ 2018ರ ಡಿಸೆಂಬರ್ 13 ರಂದು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದಾದ ನಂತರ ಮೆಡಿಕಲ್ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಕನಕಪುರದ ರಾಯಸಂಧ್ರ ಹಳ್ಳಿಯಲ್ಲಿ 25 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ನಂತರ ಟೆಂಡರ್ ಕರೆದು ಗುದ್ದಲಿ ಪೂಜೆ ಮಾತ್ರ ಬಾಕಿ ಉಳಿದಿತ್ತು.
ಟೆಂಡರ್ ಕರೆದು ಗುದ್ದಲಿ ಪೂಜೆ ನಡೆಸುವ ಹಂತದಲ್ಲಿರುವ ಯೋಜನೆಯನ್ನು ನಿಮ್ಮ ಏಕವ್ಯಕ್ತಿ ಸಂಪುಟ ಹಿಂಪಡೆದು ಹಿಂದಿನ ಸರ್ಕಾರದ ಆದೇಶ ರದ್ದುಗೊಳಿಸಿ ಯೋಜನೆಯನ್ನು ರಾತ್ರೋರಾತ್ರಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿರುವುದು ನನಗೆ ಅಚ್ಚರಿ ತಂದಿದೆ. ನೀವು ಇಂತಹ ನಿರ್ಧಾರ ಕೈಗೊಂಡಿರುವುದು ನನ್ನ ಮನಸ್ಸಿಗೆ ನೋವು ತಂದಿದೆ. ಯಾವುದೇ ಬೇರೆ ಕ್ಷೇತ್ರಕ್ಕೆ ನೀಡಿದ್ದ ಕಾಲೇಜನ್ನು ರದ್ದುಗೊಳಿಸಿ ಕನಕಪುರಕ್ಕೆ ಕಾಲೇಜು ಅನುಮೋದನೆ ನೀಡಿರಲಿಲ್ಲ ಎಂದು ನಿಮಗೆ ನೆನಪಿಸಲು ಇಚ್ಚಿಸುತ್ತೇನೆ. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಿರುವ ಬಗ್ಗೆ ನಾನು ಯಾವುದೇ ಪ್ರಶ್ನೆ ಮಾಡುವುದಿಲ್ಲ.
ಸರ್ಕಾರ ತನಗೆ ಇಚ್ಛೆ ಬಂದ ಪ್ರದೇಶಗಳಿಗೆ ಎಷ್ಟು ಕಾಲೇಜುಗಳನ್ನು ಬೇಕಾದರೂ ನೀಡಲಿ. ಆದರೆ ಕನಕಪುರಕ್ಕೆ ನೀಡಲಾಗಿದ್ದ ಕಾಲೇಜನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂಬುದು ನಮ್ಮ ವಾದ. ಇತ್ತೀಚೆಗೆ ನೀವು ಮಾಗಡಿಯಲ್ಲಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡುವುದಾಗಿ ಕೊಟ್ಟಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಕೂಡಲೇ ಕನಕಪುರಕ್ಕೆ ನೀಡಲಾಗಿದ್ದ ಕಾಲೇಜನ್ನು ಮರು ಮಂಜೂರು ಮಾಡಬೇಕು. ಅಲ್ಲದೆ ಕಾಲೇಜು ಕಟ್ಟಡ ನಿರ್ಮಾಣದ ಭೂಮಿ ಪೂಜೆಗೆ ದಿನಾಂಕ ನಿಗದಿಪಡಿಸಬೇಕು. ಒಂದು ವೇಳೆ ನಿಮ್ಮ ಸರ್ಕಾರ ಈ ವಿಚಾರದಲ್ಲಿ ದ್ವೇಷದ ರಾಜಕಾರಣ ಮುಂದುವರಿಸಿದೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಒಂದು ವೇಳೆ ಸಿಎಂ ಯಡಿಯೂರಪ್ಪನವರು ಏನಾದ್ರೂ ಕನಕಪುರ ಮೆಡಿಕಲ್ ಕಾಲೇಜನ್ನು ಮರು ಪರಿಶೀಲಿಸಿ ಮರು ಆದೇಶ ಹೊರಡಿಸದೇ ಇದ್ದರೆ, ಡಿಕೆ ಶಿವಕುಮಾರ್ ತಮ್ಮ ಹೋರಾಟ ಶುರು ಮಾಡುವುದು ಪಕ್ಕಾ ಆದಂತಿದೆ. ಅದು ಯಾವ ರೀತಿ ಅನ್ನೋದನ್ನ ಕೂಡಾ ತಿಳಿಸಿರುವುದು ಇದೀಗ ಜಿಲ್ಲೆಯ ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.