ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶನಿಕಾಟದಿಂದ ಮುಕ್ತಿ ಪಡೆಯಲು ಶನೇಶ್ವರನ ಮೊರೆ ಹೋಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಡಿ.ಕೆ.ಶಿವಕುಮಾರ್ ಶುಕ್ರವಾರ ಸಂಜೆಯೇ ವಿಶೇಷ ವಿಮಾನದ ಮೂಲಕ ತಮಿಳುನಾಡಿನ ತಿರುನಲ್ಲೂರಿನ ಶನೀಶ್ವರ ದರ್ಶನಕ್ಕೆ ತೆರಳಿದ್ದು, ಶನೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಿವಕುಮಾರ್ ಅವರ ಜಾತಕದಲ್ಲಿ ಶನಿ ಕಾಟ ಇದೆಯಂತೆ. ಈ ಹಿನ್ನೆಲೆಯಲ್ಲಿ ದೋಷ ಪರಿಹಾರಕ್ಕಾಗಿ ತಿರುನಲ್ಲೂರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಮೊದಲಿಗೆ ಡಿಕೆಶಿ ಅವರು ಶನೀಶ್ವರ ದೇವಸ್ಥಾನದ ಪವಿತ್ರ ಪುಷ್ಕರಣಿಯಲ್ಲಿ ಪುಣ್ಯ ಸ್ನಾನ ಮಾಡಿದ್ದು, ಬಳಿಕ ಶನೀಶ್ವರನ ಸನ್ನಿಧಿಯಲ್ಲಿ ಸಂಕಷ್ಟ ಹರ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ರಾತ್ರಿ ಹೊತ್ತಿನಲ್ಲಿ ಅಲ್ಲೇ ಇರುವ ದರ್ಬೆಶ್ವರನ ದರ್ಶನವನ್ನು ಮಾಡಿದ್ದಾರೆ.
ದರ್ಬೆಯಿಂದ ಆವೃತವಾದ ಆ ಶಿವಲಿಂಗ ಪೂಜೆ ಹಾಗೂ ದರ್ಶನದಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ಪ್ರತೀತಿ ಇದೆ. ಹೀಗಾಗಿ ಶನಿ ದೇವನ ಅವಕೃಪೆಯಿಂದ ಪಾರಾಗಲು ಟ್ರಬಲ್ ಶೂಟರ್ ಶನೀಶ್ವರನ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.