ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಕೆಗೆ ಕಸರತ್ತು ಮುಂದುವರಿದಿದ್ದು, ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅತೃಪ್ತ ಶಾಸಕರನ್ನು ಭೇಟಿಯಾಗಲು ಮುಂಬೈಗೆ ಹೊರಟಿದ್ದಾರೆ.
ಡಿ.ಕೆ ಶಿವಕುಮಾರ್ ಇಂದು ಮುಂಜಾನೆ ದೇವನಹಳ್ಳಿ ಏರ್ ಪೋರ್ಟಿನಿಂದ ಸುಮಾರು 6.10ಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಡಿಕೆಶಿ ಜೊತೆ ಜಿ.ಟಿ ದೇವೇಗೌಡ, ಶಿವಲಿಂಗೇಗೌಡ, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಶಾಸಕರು ಮುಂಬೈಗೆ ಹೊರಟಿದ್ದಾರೆ. ಶಿವಕುಮಾರ್ ಮುಂಬೈಗೆ ತೆರಳುವ ಮುನ್ನ ಸಿಎಂ ಜೊತೆ ಸುಮಾರು 1 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇತ್ತ ಶಿವಕುಮಾರ್ ಆಗಮನದ ಸುದ್ದಿ ಕೇಳಿ ಬೆದರಿದ ಅತೃಪ್ತರು, ರಾತ್ರೋರಾತ್ರಿ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ್ದಾರೆ. ಸಿಎಂ ಮತ್ತು ಡಿಕೆಶಿಯಿಂದ ನಮಗೆ ಬೆದರಿಕೆ ಇದೆ. ನಾವು ವಾಸ್ತವ್ಯ ಹೂಡಿರುವ ಹೋಟೆಲ್‍ಗೆ ಡಿಕೆಶಿ ದಾಳಿ ಮಾಡುವ ಸಾಧ್ಯತೆ ಇದೆ. ನಾವು ಹೋಟೆಲ್‍ನಲ್ಲಿ ಯಾರನ್ನೂ ಭೇಟಿ ಮಾಡಲು ಇಷ್ಟ ಪಡುವುದಿಲ್ಲ. ನಮಗೆ ಯಾರೊಂದಿಗೂ ಮಾತನಾಡುವ ಅವಶ್ಯಕತೆಯೂ ಕೂಡ ಇಲ್ಲ. ತಮ್ಮ ಖಾಸಗಿತನಕ್ಕೆ ರಕ್ಷಣೆ ಕೊಡಿ. ಡಿ.ಕೆ ಶಿವಕುಮಾರ್ ಅವರನ್ನು ಹೋಟೆಲ್ ಪ್ರವೇಶಿಸದಂತೆ ತಡೆಯಬೇಕು. ತಮಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅತೃಪ್ತ ಶಾಸಕರು ಮನವಿ ಮಾಡಿದ್ದಾರೆ.
ಈ ಬೆನ್ನಲ್ಲೇ ಮುಂಬೈ ಪೊಲೀಸರು ಹೋಟೆಲ್‍ಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಮಧ್ಯರಾತ್ರಿ ಮಾತನಾಡಿದ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ, ಮುಂಬೈಗೆ ಬರಬೇಡಿ ಎಂದು ಸಿಎಂ ಮತ್ತು ಡಿಕೆ ಶಿವಕುಮಾರ್‍ಗೆ ಸಂದೇಶ ರವಾನಿಸಿದ್ದೇವೆ. ನೀವು ಬಂದರೂ ನಾವು ಸಿಗಲ್ಲ. ನಾವು ಯಾರೊಂದಿಗೂ ಮಾತನಾಡಲ್ಲ. ರಾಜೀನಾಮೆಯನ್ನು ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಕಮಲವನ್ನು ಆರಂಭ ಮಾಡಿರುವ ಬಿಜೆಪಿ ಶಾಸಕರು, ಈಗ ಏನು ತಿಳಿಯದಂತೆ ಮಾತನಾಡುತ್ತಿದ್ದಾರೆ. ಆದ್ದರಿಂದ ನನ್ನ ಸ್ನೇಹಿತರು, ಶಾಸಕರನ್ನು ಭೇಟಿ ಮಾಡಲು ನಾಳೆ ಮುಂಬೈಗೆ ತೆರಳುತ್ತೇನೆ. ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರು. ಪಕ್ಷ ಸಂಕಷ್ಟದಲ್ಲಿ ಇದ್ದ ವೇಳೆ ಅವರು ಹೆಗಲು ನೀಡಿ ನಿಂತಿದ್ದರು. ಆದರೆ ಇಂದು ಅವರು ಅಸಮಾಧಾನ ಹೊಂದಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಡಿಕೆಶಿ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದರು.