ಗದಗ: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಇಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಧಾರವಾಡದ ಮುಕ್ತಿ ಮಂದಿರದ ವೀರ ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಗಳ ಗದ್ದುಗೆ ದರ್ಶನ ಪಡೆದರು. ಆದರೆ ಈ ವೇಳೆ ಸಚಿವರು ನಡೆಯಬಹುದಾಗಿದ್ದ ಸಂಭನೀಯ ಅಪಾಯದಿಂದ ಪಾರಾಗಿದ್ದಾರೆ.
ಗದ್ದುಗೆ ದರ್ಶನ ಪಡೆದ ಸಚಿವರು ದೀಪ ಬೆಳಗಿಸಿ ಪೂಜೆ ಮಾಡಿದರು. ಲಿಂಗೈಕ್ಯ ವೀರಗಂಗಾಧರ ಗದ್ದುಗೆ ಪೂಜೆ ಸಲ್ಲಿಸಿ ಹೂಮಾಲೆ ಹಾಕುವ ವೇಳೆ ಸಚಿವರು ಧರಸಿದ್ದ ಶೆಲ್ಲೆಗೆ ದೀಪ ತಾಕಿತ್ತು. ತಕ್ಷಣ ಪೂಜಾರಿ ಎಚ್ಚೆತ್ತುಕೊಂಡ ಪರಿಣಾಮ ನಡೆಯಬಹುದಿದ್ದ ಅವಘಡ ತಪ್ಪಿದೆ.
ಘಟನೆಯಿಂದ ವಿಚಲಿತರಾಗದ ಡಿಕೆ ಶಿವಕುಮಾರ್ ಅವರು ಗದ್ದುಗೆ ಬಳಿಯೇ ಮಹಾಸ್ವಾಮಿಗಳನ್ನು ನೆನೆದು ಸ್ವಲ್ಪ ಸಮಯ ಧ್ಯಾನಕ್ಕೆ ಕುಳಿತರು. ಆ ಬಳಿಕ ಗದ್ದುಗೆಯಿಂದ ತೆರಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೊಂದು ಪವಿತ್ರವಾದ ಕ್ಷೇತ್ರ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಕ್ಷೇತ್ರ. ನನಗೆ ಇಷ್ಟವಾದಂತಹ ಕ್ಷೇತ್ರಕ್ಕೆ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ. ದೇವಸ್ಥಾನಕ್ಕೆ ಆಗಮಿಸಿ ನನ್ನ ಇಷ್ಟಾರ್ಥಗಳನ್ನು ಕೇಳಿಕೊಂಡಿದ್ದೇನೆ. ಕುಂದಗೋಳ ಕ್ಷೇತ್ರದ ಜನ ನಮ್ಮನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ರಾಜಕೀಯ ವಿಚಾರಗಳನ್ನು ಮಾತನಾಡಲ್ಲ ಎಂದರು.