ಬೆಂಗಳೂರು: ಕೇವಲ ಮುಂಬೈನಲ್ಲಿ ಮಾತ್ರವಲ್ಲ ಬೆಂಗಳೂರಲ್ಲಿಯೂ ಸಚಿವ ಡಿಕೆ ಶಿವಕುಮಾರ್ ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು. ತಡರಾತ್ರಿ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ ವಿಷಯ ತಿಳಿದ ಕೂಡಲೇ ಶಾಸಕರ ಭೇಟಿಗೆ ಪ್ರಯತ್ನಿಸಿದರು. ಸೋಮಶೇಖರ್ ಭೇಟಿಗಾಗಿ 1 ಗಂಟೆ ಕಾಲ ರಸ್ತೆಯಲ್ಲಿಯೇ ನಿಂತು ಕಾದಿದ್ದಾರೆ.
ಇತ್ತ ಡಿ.ಕೆ.ಶಿವಕುಮಾರ್ ತಮ್ಮ ನಿವಾಸದ ಬಳಿ ಇರುವ ವಿಷಯ ತಿಳಿದ ಎಸ್.ಟಿ.ಸೋಮಶೇಖರ್ ಮಾರ್ಗಮಧ್ಯೆ ರೂಟ್ ಬದಲಿಸಿ ಬೇರೊಂದು ಕಡೆ ತೆರಳಿದರು. ಒಂದು ಗಂಟೆ ಕಾದರೂ ಶಾಸಕರು ಬರದಿದ್ದಾಗ ಡಿ.ಕೆ.ಶಿವಕುಮಾರ್ ಮುಂಬೈನಂತೆ ಇಲ್ಲಿಯೂ ಬರಿಗೈಯಲ್ಲಿ ಹಿಂದಿರುಗಿದರು.
ರಾತ್ರಿ 11.15ಕ್ಕೆ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಆಗಮಿಸಿದ್ರೆ, ಎಸ್‍ಟಿ ಸೋಮಶೇಖರ್ ತಡರಾತ್ರಿ 1 ಗಂಟೆಗೆ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಕರ್ನಾಟಕ ವಸತಿ ಮಹಾಮಂಡಳಿಯ ಚುನಾವಣೆ ಇರುವ ಹಿನ್ನೆಲೆಯಲ್ಲಿ ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎಸ್.ಟಿ.ಸೋಮಶೇಖರ್ ಆಗಮನಕ್ಕೂ ಮುನ್ನವೇ ವಿಮಾನ ನಿಲ್ದಾಣದಲ್ಲಿ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಾಣಿಸಿಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಯ್ತು. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳನ್ನು ಕಂಡ ಕೂಡಲೇ ಸೋಮಶೇಖರ್ ಅವರಿಂದ ಎಸ್.ಆರ್.ವಿಶ್ವನಾಥ್ ಅಂತರ ಕಾಯ್ದುಕೊಂಡರು. ಇತ್ತ ಸೋಮಶೇಖರ್ ಕಾರ್ ನ್ನು ಹಿಂಬಾಲಿಸಿಕೊಂಡು ಎಸ್.ಆರ್.ವಿಶ್ವನಾಥ್ ಹೋದರು. ಮಾಜಿ ಡಿಸಿಎಂ ಆರ್.ಅಶೋಕ್ ಅವರ ಸುಪರ್ದಿಯಲ್ಲಿಯೇ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.