ಮಡಿಕೇರಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ ಮೇಕೆದಾಟು ಯೋಜನೆ ಆದಷ್ಟು ಬೇಗ ಆರಂಭವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದರು.
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಹಿನ್ನೆಲೆ ಇಂದು ಕೊಡಗಿನ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ಬೆಂಗಳೂರಿನ ಒಂದೂವರೆ ಕೋಟಿ ಜನರಿಗೆ ಎಲ್ಲ ಕಾಲದಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಜೊತೆಗೆ 7 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ಮೇಕೆದಾಟು ಯೋಜನೆಯನ್ನು ಆದಷ್ಟು ಬೇಗ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
Advertisement
Advertisement
ಯೋಜನೆಗೆ ಬೇಕಾಗಿರುವ 9900 ಕೋಟಿ ರೂಪಾಯಿಗೆ ತಾಂತ್ರಿಕ ಅನುಮೋದನೆ ಸಿಕ್ಕಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ನಿರಪೇಕ್ಷಣಾ ವರದಿ ಬೇಕಾಗಿದೆ. ಇದಾದಲ್ಲಿ ಯೋಜನೆ ಜಾರಿಗೆ ಯಾವುದೇ ಅಡೆತಡೆಗಳಿಲ್ಲ. ಯೋಜನೆ ಮಾಡುವುದರಿಂದ ಕೃಷಿ ಭೂಮಿ ಹೆಚ್ಚಿನ ಪ್ರಮಾಣದಲ್ಲಿ ಮುಳುಗಡೆಯಾಗುವುದಿಲ್ಲ. ಆದ್ದರಿಂದ ಹೆಚ್ಚಿನ ರೈತರಿಗೆ ಪರಿಹಾರ ಕೊಡಬೇಕಾಗಿ ಬರುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಭೂಮಿ ಮುಳುಗಡೆಯಾಗುತ್ತದೆ. ಆದ್ದರಿಂದ ಯೋಜನೆಯನ್ನು ಬೇಗ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
Advertisement
ನಮ್ಮ ನೀರನ್ನು ನಾವು ಬಳಕೆ ಮಾಡಿಕೊಳ್ಳಲು ಯಾರ ಹಂಗಿಲ್ಲ. ಯೋಜನೆಯನ್ನು ಜಾರಿ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತೇವೆ. ಅದಕ್ಕಾಗಿ ಮೇಕೆದಾಟಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲಿದ್ದೇವೆ. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಈಗಾಗಲೇ ಮೇಕೆದಾಟು ಯೋಜನೆಗೆ ಜೆಡಿಎಸ್ ಒಪ್ಪಿಗೆ ಸೂಚಿಸಿದೆ ಎಂದರು.
Advertisement
ಯೋಜನೆಯಲ್ಲಿ ಕರ್ನಾಟಕಕ್ಕೆ ಎಷ್ಟು ನೀರು ಬಳಕೆ ಮಾಡಿಕೊಳ್ಳಬೇಕು. ತಮಿಳುನಾಡಿಗೆ ಎಷ್ಟು ನೀರು ಕೊಡಬೇಕು ಎನ್ನುವುದೆಲ್ಲವೂ ನಿರ್ಧಾರವಾಗಿದೆ. ಮೇಕೆದಾಟಿನಿಂದ ಕರ್ನಾಟಕಕ್ಕೆ ಬಳಕೆಯಾಗಬೇಕಾಗಿದ್ದ ಅಪಾರ ಪ್ರಮಾಣದ ನೀರು ಹರಿದು ಸಮುದ್ರ ಸೇರುತ್ತಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ನಿಜವಾದ ಹಿಂದೂ ಅಲ್ಲ: ನಾರಾಯಣಸ್ವಾಮಿ ವಾಗ್ದಾಳಿ
ಯೋಜನೆಯನ್ನು ತಮಿಳುನಾಡು ವಿರೋಧಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟಿನಿಂದ ಕರ್ನಾಟಕಕ್ಕೆ ಅಷ್ಟೇ ಅಲ್ಲ, ತಮಿಳುನಾಡಿಗೂ ಅನುಕೂಲವಾಗಲಿದೆ. ಆದರೆ ತಮಿಳುನಾಡು ರಾಜಕೀಯಕ್ಕಾಗಿ ಈ ಯೋಜನೆಯನ್ನು ವಿರೋಧಿಸುತ್ತಿದೆ ಎಂದು ದೂರಿದರು.
2022 ರ ಜನವರಿ 9 ರಿಂದ 22 ರವರೆಗೆ ಅಂದರೆ ಹತ್ತು ದಿನಗಳ ಕಾಲ ಮೇಕೆದಾಟಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲಿದ್ದೇವೆ. ಅದರ ಅಂಗವಾಗಿ ನಾಡಿನ ಅಧಿದೇವತೆಯಂತಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡುತ್ತಿದ್ದೇವೆ ಎಂದರು.