ಚೆನ್ನೈ: ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದು, ನನ್ನನ್ನು ಮಾತನಾಡಿಸಿದರು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚೆನ್ನೈನ ರೇಲಾ ಆಸ್ಪತ್ರೆಗೆ ಸಿದ್ದಗಂಗಾ ಶ್ರೀಗಳ ಭೇಟಿ ಬಳಿಕ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಆಸ್ಪತ್ರೆಯ ಆಡಳಿತ ಮಂಡಳಿ ತುಂಬಾ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದು, ಯಾರನ್ನು ಒಳಗೆ ಬಿಡುವುದಿಲ್ಲ. ಆದರೆ ನಾನು ಮಂತ್ರಿ ಎಂಬ ಕಾರಣಕ್ಕೆ ಮಾತ್ರ ಭೇಟಿ ಮಾಡಲು ಅವಕಾಶ ನೀಡಿದರು. ಶೀಘ್ರವೇ ಶ್ರೀಗಳು ಆಸ್ಪತ್ರೆಯಿಂದ ನಡೆದುಕೊಂಡು ಹೊರಬರುತ್ತಾರೆ. ಇಲ್ಲಿನ ಆಸ್ಪತ್ರೆ ನೋಡಿದರೆ ಖುಷಿ ಆಗುತ್ತೆ. ಅಲ್ಲದೇ ಆಡಳಿತ ವ್ಯವಸ್ಥೆ, ಚಿಕಿತ್ಸಾ ವಿಧಾನ ಎಲ್ಲವೂ ಚೆನ್ನಾಗಿದೆ. ಭಕ್ತಾದಿಗಳು ಆಸ್ಪತ್ರೆ ಬಳಿ ಬಂದು ವೈದ್ಯರಿಗೆ ತೊಂದರೆ ನೀಡುವುದು ಬೇಡ ಎಂದು ಮನವಿ ಮಾಡಿದರು.
Advertisement
Advertisement
ರೇಲಾ ಆಸ್ಪತ್ರೆ ಅತ್ಯುತ್ತಮವಾಗಿದ್ದು, ಭಾರತದಲ್ಲೇ ಉತ್ತಮವಾದ ಆಸ್ಪತ್ರೆ ಎಂಬ ಹೆಗ್ಗಳಿಕೆ ಇದೆ. ಇಲ್ಲಿ 150 ಐಸಿಯೂ ಕೊಠಡಿಗಳಿದ್ದು, ಉತ್ತಮ ನುರಿತ ವೈದ್ಯರಿದ್ದಾರೆ. ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವನಾಗಿ ಹೇಳುತ್ತಿದ್ದು, ನಮ್ಮಲ್ಲಿ ಇಂತಹ ಆಸ್ಪತ್ರೆ ಇಲ್ಲ. ಈ ರೀತಿ ಆಸ್ಪತ್ರೆ ನಮ್ಮಲ್ಲಿ ಆಗುವ ನಂಬಿಕೆಯೂ ಇಲ್ಲ. ಐದು ದಿನದ ನವಜಾತ ಶಿಶುವಿನಿಂದ 111 ವರ್ಷದ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
Advertisement
ಶ್ರೀಗಳ ಆರೋಗ್ಯದ ಕುರಿತು ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ. ರವೀಂದ್ರ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಶ್ರೀಗಳಿಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯಕ್ಕೆ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಶಸ್ತ್ರಚಿಕಿತ್ಸೆ ನಂತರ ಸ್ವಾಮೀಜಿಗಳನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಮೂರು ದಿನಗಳವರೆಗೂ ಐಸಿಯುನಲ್ಲೇ ಇರಬೇಕಾಗಿದೆ. ಸ್ವಾಮೀಜಿಗಳನ್ನ ಸದ್ಯ ಯಾರು ಭೇಟಿ ಮಾಡುವ ಆಗಿಲ್ಲ, ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಮಾಹಿತಿ ನೀಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv