ಬೆಂಗಳೂರು: ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಕಳೆದ ಕೆಲ ವರ್ಷಗಳಿಂದ ನಾವು ಕೋವಿಡ್‍ನಿಂದ ನರಳಿದ್ದೇವೆ. ಹೊಸ ವರ್ಷಕ್ಕೆ ಕಾಲಿಟ್ಟಿದ್ದು, ಎಲ್ಲರ ಬದುಕು ಆರೋಗ್ಯಕರವಾಗಿ ಉತ್ತಮವಾಗಲಿ. ವ್ಯಾಪಾರ-ವಹಿವಾಟು, ಶಿಕ್ಷಣ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಕಳೆದುಕೊಂಡವರೆಲ್ಲರಿಗೂ ಈ ವರ್ಷ ಭಾಗ್ಯ ಮರುಕಳಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು
ಕಳೆದ ಒಂದು ವಾರದಿಂದ ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ನಿನ್ನೆ ಪಶುಸಂಗೋಪನಾ ಇಲಾಖೆಯಿಂದ ಆದೇಶ ಹೊರಡಿಸಿ, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಸೇರಿ ಕೋಳಿ, ಕುರಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿಯಂತ್ರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ಹಾಗೂ ಇತರ ಎಲ್ಲಾ ಕಡೆಗಳಲ್ಲಿ ಇನ್ನು ಮುಂದೆ ಮಾಂಸದ ವ್ಯಾಪಾರ ಮಾಡುವವರು ಪ್ರಾಣಿ ವಧೆ ಮಾಡುವ ಮುನ್ನ ಸ್ಟನ್ನಿಂಗ್ (ಪ್ರಜ್ಞೆ ತಪ್ಪಿಸುವ) ಮಾಡಬೇಕು. ಇನ್ನು ಮುಂದೆ ಎಲ್ಲ ವ್ಯಾಪಾರಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ವ್ಯವಸ್ಥೆ ಇದ್ದರಷ್ಟೇ ಇನ್ನು ಮುಂದೆ ಪರವಾನಗಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಡೀ ರಾಜ್ಯದ ರೈತರು ಕೋಳಿ, ಕುರಿ, ಮೇಕೆಗಳನ್ನು ಸಾಕುತ್ತಾರೆ. ಅದು ಅನೇಕರ ಉಪ ಕಸುಬಾಗಿದೆ. ಮಾಂಸದ ವ್ಯಾಪಾರ ಮಾಡುವವರಿಗೆ ರೈತರು ತಾವು ಸಾಕಿದ ಕೋಳಿ, ಕುರಿಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಲಾಲ್ ಮಾಡುತ್ತಾರೆ. ಮತ್ತೆ ಕೆಲವರು ಹಲಾಲ್ ಮಾಡುವುದಿಲ್ಲ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು. ಇದನ್ನೂ ಓದಿ: RSS, ಬಿಜೆಪಿಯವರಿಗೆ ಯಾರೂ ಹೆದರಬೇಡಿ, ಕಾಂಗ್ರೆಸ್ ನಿಮ್ಮೊಂದಿಗಿದೆ: ಡಿಕೆಶಿ
ಈ ದೇಶದಲ್ಲಿ ಯಾರು ಹೇಗೆ ಬದುಕಬೇಕು, ಯಾರು ಏನನ್ನು ತಿನ್ನಬೇಕು ಎಂಬುದು ಸಾವಿರಾರು ವರ್ಷಗಳಿಂದ ಪರಂಪರೆಯಾಗಿ ನಡೆದುಕೊಂಡು ಬಂದಿದೆ. ಅವರೆಲ್ಲ ಅನಾದಿ ಕಾಲದಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ವಸ್ತುಗಳ ವಿನಿಮಯ ವ್ಯಾಪಾರ ಪದ್ಧತಿ ಕೂಡ ಇತ್ತು ಎಂದು ತಿಳಿಸಿದರು.
ರಾಜ್ಯದ ವಿವಿಧ ಕಡೆಗಳಿಂದ ರೈತರು ಕರೆ ಮಾಡಿ, ಸರ್ಕಾರದ ಈ ಆದೇಶದಿಂದ ನಮ್ಮ ಕುರಿ, ಕೋಳಿಗಳನ್ನು ಕೊಳ್ಳುವವರಿಲ್ಲದಂತಾಗಿದೆ. ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಒಂದು ಪಕ್ಷದ ಅಧ್ಯಕ್ಷನಾಗಿ ನೀವು ಯಾಕೆ ಸುಮ್ಮನೆ ಕೂತಿದ್ದೀರಿ ಅಂತ ಕೇಳುತ್ತಿದ್ದಾರೆ ಎಂದು ಹೇಳಿದರು.
ಹಳ್ಳಿಗಳಲ್ಲಿ ಪಶು ಸಂಗೋಪನೆ ಮಾಡಿ ಎಂದು ಉತ್ತೇಜನ ನೀಡಿದವರು ಯಾರು? ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿ ಹೆಚ್ಚಾಗಿ ಇದನ್ನೇ ಅವಲಂಬಿಸಿದ್ದಾರೆ. ಈ ಕೋಳಿ, ಕುರಿಗಳು ಸರಿಯಾದ ಸಮಯಕ್ಕೆ ಮಾರಾಟವಾಗದಿದ್ದರೆ, ಅವುಗಳಿಗೆ ನಿತ್ಯ ಹಾಕುವ ಮೇವು, ಸಾಕಣೆ ಮಾಡುವವನಿಗೆ ಹೊರೆಯಾಗುತ್ತದೆ ಎಂದು ನುಡಿದರು.
ಬಟ್ಟೆ ಹೊಲಿಯುವವನು ಬಟ್ಟೆ ಹೊಲಿಯುತ್ತಾನೆ, ಮೊಟ್ಟೆ ಮಾರುವವನು ಮೊಟ್ಟೆ ಮಾರುತ್ತಾನೆ. ಹೀಗೆ ಒಬ್ಬೊಬ್ಬರು ಒಂದೊಂದು ವ್ಯಾಪಾರ ಮಾಡುತ್ತಿದ್ದಾರೆ. ಒಬ್ಬರು ತಮ್ಮ ವ್ಯಾಪಾರ ಬಿಟ್ಟು ಬೇರೆಯದನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ರೈತರು, ವರ್ತಕರು, ಅವರು ಯಾವುದೇ ಸಮುದಾಯದವರಿರಲಿ, ತಮ್ಮ ಬದುಕನ್ನು ಯಾವ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೋ ಅದರಂತೆ ಸಾಗಲು ಸರ್ಕಾರ ಅವಕಾಶ ನೀಡಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡುವುದು ಬೇಡ. ಈ ಹೊಸ ತೊಡುಕು ಆಚರಣೆಯನ್ನು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಮಾತನಾಡಿದರು.
ಹಲಾಲ್ ಕಟ್‍ಗೆ ಅವಕಾಶ ನೀಡಬಾರದು ಎಂದು ಕೆಲವು ಸಂಘಟನೆಗಳು ಆಗ್ರಹಿಸುತ್ತಿವೆ ಎಂಬ ಪ್ರಶ್ನೆಗೆ, ‘ಕೋಳಿ ಮತ್ತು ಕುರಿಗಳಿಗೆ ಪ್ರಜ್ಞೆ ತಪ್ಪಿಸಬೇಕಂತೆ. ಹೇಗೆ ತಪ್ಪಿಸಬೇಕು? ತಲೆಗೆ ಹೊಡೆದರೆ ಅವು ಸಾಯುವುದಿಲ್ಲವೇ? ಅದು ಹಿಂಸೆ ಅಲ್ಲವೇ? ಮಾಂಸ ವ್ಯಾಪಾರದಲ್ಲೂ ಅನೇಕ ಉಪ ವ್ಯಾಪಾರಗಳಿವೆ. ಇವು ಸಾಮಾಜಿಕವಾಗಿ ಬೆಸೆದುಕೊಂಡಿರುವ ವ್ಯಾಪಾರಗಳು. ನಾನು ಈ ವಿಚಾರದಲ್ಲಿ ಧ್ವನಿ ಎತ್ತದಿದ್ದರೆ ನನ್ನ ಸ್ಥಾನ ಹಾಗೂ ಜವಾಬ್ದಾರಿಗೆ ದ್ರೋಹ ಬಗೆದಂತಾಗುತ್ತದೆ. ಮುಖ್ಯಮಂತ್ರಿಗಳು ಸಂಜೆ ಒಳಗಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.