ಬೆಂಗಳೂರು: ಅತೃಪ್ತ ಶಾಸಕರನ್ನು ಮನವೊಲಿಸಲು ಮುಂಬೈಗೆ ಹೋಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ಮುಂಬೈಗೆ ಹೋಗಿರುವ ಬಗ್ಗೆ ಸಿದ್ದರಾಮಯ್ಯ ಆಪ್ತರ ಬಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಹೇಳಿ ಹೋದರಾ? ನಮ್ಮನ್ನ ಯಾರಾದರೂ ಕೇಳಿ ಹೋದರಾ? ಅವರ ಪಾಡಿಗೆ ಅವರು ಹೊರಟು ಹೋದರೆ ಹೇಗೆ? ಸಿಎಲ್‍ಪಿ ನಾಯಕನಾದ ನನ್ನ ಗಮನಕ್ಕೆ ತಂದು ಹೋಗಿದ್ದಾರಾ? ಎಂದು ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಆತ್ಮೀಯರ ಮುಂದೆ ಅಸಮಧಾನ ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
Advertisement
Advertisement
ಶಿವಕುಮಾರ್ ಮುಂಬೈಗೆ ಹೋಗುವ ಮೊದಲೇ ಅತೃಪ್ತರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇದರಿಂದ ಅವರನ್ನು ಒಳಗೆ ಹೋಗುವುದಕ್ಕೆ ಬಿಟ್ಟಿಲ್ಲ. ಹೀಗಾಗಿ ಅವರು ರಸ್ತೆಯಲ್ಲಿ ಕುಳಿತಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಅಲ್ವಾ. ಸಿಎಂ ಜೊತೆ ಮಾತನಾಡಿಕೊಂಡು ಹೋಗಿ ಒನ್ ಮ್ಯಾನ್ ಶೋ ಕೊಡುತ್ತಿದ್ದಾರೆ. ಇದು ನಮ್ಮ ಪಕ್ಷದ ನಿರ್ಧಾರ ಅಲ್ಲ ಎಂದು ಡಿಕೆಶಿ ನಡೆಯ ಬಗ್ಗೆ ಗುಲಾಂನಬಿ ಆಜಾದ್ ಬಳಿಯು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.
Advertisement
Advertisement
ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಶಿವಕುಮಾರ್ ಮುಂಬೈನ ಹೋಟೆಲ್‍ಗೆ ಹೋಗಿದ್ದಾರೆ. ಆದರೆ ಅಲ್ಲಿನ ಪೊಲೀಸರು ಡಿಕೆಶಿಯನ್ನು ಹೋಟೆಲ್‍ಗೆ ಬಿಡದೆ ಹೊರಗೆ ನಿಲ್ಲಿಸಿದ್ದಾರೆ. ಅತ್ತ ಅತೃಪ್ತರು ಕೂಡ ನಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಡಿಕೆಶಿ ಮಾತ್ರ ನಾನು ನಮ್ಮ ಸ್ನೇಹಿತರನ್ನು ಭೇಟಿಯಾಗಲೇಬೇಕು ಎಂದು ಪಟ್ಟು ಹಿಡಿದು ಹೋಟೆಲ್ ಮುಂಭಾಗ ಕುಳಿತಿದ್ದಾರೆ.