ಬೆಂಗಳೂರು: ವಿಪಕ್ಷ ನಾಯಕ, ಸಿಎಲ್ ಪಿ ಸ್ಥಾನದ ಆಕಾಂಕ್ಷಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಇಬ್ಬರಿಗೂ ಹೈಕಮಾಂಡ್ ಡೆಡ್ ಲೈನ್ ನೀಡಿದೆ. ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್ ಪಿ ನಾಯಕನ ಎರಡು ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇರೆಯವರಿಗೆ ಕೊಟ್ಟರೂ ಎರಡನ್ನು ಒಬ್ಬರಿಗೆ ಕೊಡಬೇಕು ಎಂದು ಹೊಸ ವರಸೆ ತಗೆದಿದ್ದಾರೆ. ಇನ್ನೊಂದು ಕಡೆ ಡಿಕೆಶಿಗೆ ಕೆಪಿಸಿಸಿ ಪಟ್ಟ ತಪ್ಪಿಸಲು ಯತ್ನಿಸುತ್ತ, ನಾಲ್ಕು ಕಾರ್ಯಾಧ್ಯಕ್ಷರ ನೇಮಕ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನ ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್, ವಿಪಕ್ಷ ಹಾಗೂ ಸಿಎಲ್ ಪಿ ಪ್ರತ್ಯೇಕಿಸುವುದು ಖಚಿತ. ನಿಮ್ಮ ಆಯ್ಕೆ ಏನು ತಿಳಿಸಿ ಎಂದು ಖಡಕ್ ಸೂಚನೆ ನೀಡಿದೆ. ಕೆಪಿಸಿಸಿಗೆ ಕಾರ್ಯಾಧ್ಯಕ್ಷರ ನೇಮಕ ಬೇಕು, ಬೇಡವಾ ಅನ್ನೋ ತೀರ್ಮಾನ ಹೈಕಮಾಂಡ್ ಮಾಡುತ್ತೆ. ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ವಿಷಯದಲ್ಲಿ ನಿಮ್ಮ ನಿಲುವು ಏನು ತಿಳಿಸಿ ಎಂದು ಖಡಕ್ಕಾಗಿ ಸೂಚಿಸಿದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಓಕೆ. ಜೊತೆಯಲ್ಲಿ ಕಾರ್ಯಾಧ್ಯಕ್ಷ ಸ್ಥಾನ ಯಾಕೆ ಎಂದಿರುವ ಡಿ.ಕೆ.ಶಿವಕುಮಾರ್ ಗು ಅಂತಿಮ ತೀರ್ಮಾನ ತಿಳಿಸುವಂತೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
ಇಂದು ಮಧ್ಯಾಹ್ನದೊಳಗೆ ಉಭಯ ನಾಯಕರು ತಮ್ಮ ಅಭಿಪ್ರಾಯವನ್ನ ಹೈಕಮಾಂಡ್ ಗೆ ತಿಳಿಸಬೇಕಿದೆ. ಈ ಇಬ್ಬರು ನಾಯಕರಿಂದಲೇ ಎಲ್ಲಾ ಸ್ಥಾನಮಾನಗಳ ನೇಮಕ ತಡವಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಇಬ್ಬರು ಪವರ್ ಫುಲ್ ನಾಯಕರ ಅಂತಿಮ ಅಭಿಪ್ರಾಯಕ್ಕೆ ಹೈ ಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ಇಬ್ಬರು ಹೈ ಕಮಾಂಡ್ ಸೂಚನೆಗೆ ತಮ್ಮ ಪಟ್ಟು ಬದಲಿಸಿದರೆ ಓಕೆ. ಇಲ್ಲದಿದ್ದರೆ ಅವರಿಬ್ಬರ ಅಭಿಪ್ರಾಯ ಬದಿಗಿಟ್ಟು ಹೈಕಮಾಂಡ್ ನಿಲುವು ಪ್ರಕಟವಾಗುವುದು ಖಚಿತ.