ನವದೆಹಲಿ: ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಪೊಲೀಸರು ತಿಹಾರ್ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.
ಹೈ ಬಿಪಿ ಮತ್ತು ಹೈ ಶುಗರ್ ಹಿನ್ನೆಲೆಯಲ್ಲಿ ಶನಿವಾರದಿಂದ ಡಿಕೆ ಶಿವಕುಮಾರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವೈದ್ಯಾಧಿಕಾರಿಗಳು ಆರೋಗ್ಯ ಸ್ಥಿರ ಎಂಬ ವರದಿ ನೀಡಿದ ಬೆನ್ನಲ್ಲೇ ತಿಹಾರ ಜೈಲಿಗೆ ಡಿ.ಕೆ.ಶಿವಕುಮಾರ್ ಶಿಫ್ಟ್ ಮಾಡಲಾಗಿದೆ. ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ಈಗಾಗಲೇ ಡಿಕೆಶಿವಕುಮಾರ್ ಅವರನ್ನ ಅಕ್ಟೋಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ. ಆನಾರೋಗ್ಯದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟಿನಲ್ಲಿ ವಾದ-ಪ್ರತಿವಾದ ನಡೆಯಲಿದೆ. ಬುಧವಾರ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ಆದರೆ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಧೀಶ ಅಜಯ್‍ಕುಮಾರ್ ಕುಹರ್ ವಿಚಾರಣೆಯನ್ನ ಇವತ್ತಿಗೆ ಮುಂದೂಡಿದ್ದಾರೆ. ಜಾಮೀನು ಕೋರಿ ಡಿಕೆಶಿ ಪರ ವಕೀಲರ ವಾದಕ್ಕೆ ಇಡಿ ವಕೀಲರು ಪ್ರತಿವಾದ ಮಂಡಿಸಬೇಕಿದೆ.
ಒಂದು ವೇಳೆ ಇವತ್ತೂ ವಾದ-ಪ್ರತಿವಾದ ಮುಂದುವರಿಯಬಹುದು ಅಥವಾ ವಾದ-ಪ್ರತಿವಾದ ಮುಗಿದು ಇವತ್ತೇ ಡಿಕೆಶಿಗೆ ಜಾಮೀನು ನೀಡಬಹುದು ಇಲ್ಲವೇ ಜಾಮೀನು ಅರ್ಜಿ ತಿರಸ್ಕರಿಸಬಹುದು ಅಥವಾ ಆದೇಶವನ್ನ ಕಾಯ್ದಿರಿಸಬಹುದು. ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.