ಬೆಂಗಳೂರು: ನಮ್ಮ ದೇಶ ಅನೇಕ ಭಾಷೆಗಳಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಅವರವರ ಭಾಷೆ ಸ್ವಾಭಿಮಾನದ ವಿಷಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹಿಂದಿ ರಾಷ್ಟ್ರಭಾಷೆ ವಿವಾದ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಯಾರ ಟ್ವೀಟ್ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಸಿದ್ದನಿಲ್ಲ. ದೇಶದಲ್ಲಿ ಯಾವ, ಯಾವ ಭಾಷೆಗೆ ಯಾವ ಮಾನ್ಯತೆ ನೀಡಬೇಕು ಎಂದು ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ. ನಮ್ಮ ದೇಶ ಅನೇಕ ಭಾಷೆಗಳಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಅವರವರ ಭಾಷೆ ಸ್ವಾಭಿಮಾನದ ವಿಷಯವಾಗಿದೆ. ನಮ್ಮ ರಾಜ್ಯದ ಕೊಡಗು, ಮಂಗಳೂರು ಭಾಗಗಳಲ್ಲಿ ಬೇರೆ ಭಾಷೆಗಳನ್ನು ಮಾತನಾಡಿದರೂ, ನಾವು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ಧ್ವನಿಗೂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ
Advertisement
Advertisement
ನಾವೆಲ್ಲ ಕನ್ನಡಿಗರು. ನಮಗೆ ನಮ್ಮದೇ ಆದ ಭಾಷೆ, ಧ್ವಜ, ಸ್ವಾಭಿಮಾನವಿದೆ. ನಮ್ಮ ನೋಟಿನಲ್ಲಿ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿ ಮುದ್ರಣ ಮಾಡಲಾಗಿದೆ. ಈ ನೋಟು ರಾಜ್ಯ ಸೇರಿದಂತೆ ರಾಷ್ಟ್ರದಲ್ಲಿ ಚಲಾವಣೆಯಾಗುತ್ತದೆ. ಹೀಗಾಗಿ ಭಾಷೆ ವಿಚಾರದಲ್ಲಿ ಚರ್ಚೆಯ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
Advertisement
ದೇಶದ ಉತ್ತರ ಭಾಗದಲ್ಲಿ ಹಿಂದಿ ಭಾಷೆ ಮಾತನಾಡುತ್ತಿದ್ದು, ಆ ಭಾಷೆಗೆ ಯಾವ ರೀತಿ ಗೌರವ ನೀಡಬೇಕೋ ಅದನ್ನು ನೀಡಲಾಗುತ್ತಿದೆ. ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಕೇಂದ್ರ ಸಚಿವರು ಯಾರಾದರೂ ಈ ಬಗ್ಗೆ ಚರ್ಚೆ ಮಾಡಿದರೆ ಅದಕ್ಕೆ ಉತ್ತರ ನೀಡೋಣ. ನಮ್ಮ ನೆಲ, ಜಲ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಮೊದಲ ಪ್ರಾತಿನಿಧ್ಯ ಕನ್ನಡ ಭಾಷೆಯಾಗಿರುತ್ತದೆ. ನಂತರ ನಾವು ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕಿನ ಪ್ರಕಾರ ಬೇರೆ ಭಾಷೆಗಳನ್ನು ಬಳಸಬಹುದು. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ
Advertisement
There are 19,500 mother tongues spoken in India.
Our love for India feels the same in every language.
As a proud Kannadiga and a proud Congressman let me remind everyone that Congress created linguistic states so that no one language dominates another.#UnityInDiversity
— DK Shivakumar (@DKShivakumar) April 28, 2022
ನಮ್ಮ ಕೆಲವು ಸಂಸದರು ಹಿಂದಿ ಹಾಗೂ ಇಂಗ್ಲಿಷ್ ಭಾಷೆ ತಿಳಿದಿದ್ದರೂ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾರೆ. ಇದಕ್ಕೆ ಅವಕಾಶವಿದೆ. ನನ್ನ ಸಹೋದರ ಹಲವು ಬಾರಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ವಿರೋಧಪಕ್ಷದ ನಾಯಕರಾಗಿರುವ ಕಾರಣ ಹಿಂದಿಯಲ್ಲಿ ಮಾತನಾಡುತ್ತಾರೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಭಾಷೆಯ ಗೌರವ ಉಳಿಸಿಕೊಳ್ಳಲು ನಾವು ಏನು ಮಾಡಬೇಕು ಅದನ್ನು ಮಾಡೋಣ ಎಂದಿದ್ದಾರೆ.