– ಬೆಳಗ್ಗಿನ ಜಾವ ವೋಟ್ ಡಿಲೀಟ್ ಮಾಡ್ತಿದ್ರು ಅಂತ ಡಿಸಿಎಂ ಆರೋಪ
– 1.12 ಕೋಟಿ ಸಹಿ ಸಂಗ್ರಹ ಆಗಿದೆ
ಬೆಂಗಳೂರು: ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಮತಗಳ್ಳತನಕ್ಕೆ ಬೇರೆ ಬೇರೆ ರಾಜ್ಯಗಳ ಮೊಬೈಲ್ ನಂಬರ್ ಬಳಕೆ ಮಾಡಿರೋದು ಹಾಗೂ ಬೆಳಗ್ಗಿನ ಜಾವ ವೋಟ್ ಡಿಲೀಟ್ ಮಾಡಿಸುತ್ತಿದ್ರು ಅನ್ನೋದು ಎಸ್‌ಐಟಿ (SIT) ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೊಸ ಬಾಂಬ್ ಸಿಡಿಸಿದರು.
LIVE : ಮತಗಳ್ಳತನದ ವಿರುದ್ಧ ಜಂಟಿ ಮಾಧ್ಯಮಗೋಷ್ಠಿ, ಭಾರತ್ ಜೋಡೋ ಸಭಾಂಗಣ, ಕೆಪಿಸಿಸಿ ಕಚೇರಿ.https://t.co/KQF5AG8TXR
— DK Shivakumar (@DKShivakumar) November 8, 2025
ಕೆಪಿಸಿಸಿ (KPCC) ಭಾರತ್ ಜೋಡೋ ಭವನದಲ್ಲಿ ಸಿಎಂ, ಡಿಸಿಎಂ ಜಂಟಿ ಸುದ್ದಿಗೋಷ್ಠಿಯಲ್ಲಿ, ವೋಟ್ ಚೋರಿ ಅಭಿಯಾನದ ಬಗ್ಗೆ ಸಹಿ ಸಂಗ್ರಹ ಕುರಿತು ಮಾತನಾಡಿದರು. ವೋಟ್ ಚೋರಿ (Vote Chori) ಬಗ್ಗೆ ದೇಶದೆಲ್ಲೆಡೆ ಅಭಿಯಾನ ಆಗ್ತಿದೆ. ಕರ್ನಾಟಕದಲ್ಲೂ ಆಗ್ತಿದೆ. ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಆಗಿತ್ತು. ಅದನ್ನ ಕಾಂಗ್ರೆಸ್ ಬೆಳಕಿಗೆ ತಂದಿತ್ತು. ಅದೇ ರೀತಿ ಗಾಂಧಿನಗರ, ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ಆಗಿದೆ. ರಾಹುಲ್ ಗಾಂಧಿ ಅವರು ಇದನ್ನ ಬಯಲಿಗೆಳೆದು ದೇಶದ ಗಮನ ಸೆಳೆದರು. ಈಗ ಆಳಂದದಲ್ಲಿ ಬೆಳಗಿನ ಜಾವ ವೋಟ್ ಡಿಲೀಟ್ ಮಾಡಿಸುತ್ತಿದ್ದದ್ದು, ಜೊತೆಗೆ ಬೇರೆ ಬೇರೆ ರಾಜ್ಯಗಳ ಫೋನ್ ನಂಬರ್ ಬಳಸಿ ಮತಗಳ್ಳತನಕ್ಕೆ ಯತ್ನಿಸಿರುವುದು ಎಲ್ಲವೂ ಎಸ್‌ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ನಾವು ಕೇಳಿದ್ರೆ ನಮ್ಮಿಂದಲೇ ಮಾಹಿತಿ ಕೇಳ್ತಾರೆ
ಮುಂದುವರಿದು… ಚುನಾವಣಾ ಆಯೋಗದ ಜವಾಬ್ದಾರಿ ನೆನಪಿಸಿದ್ದೇವೆ. ಮತಗಳ್ಳತನ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದೇವೆ. ಆಳಂದ ಕ್ಷೇತ್ರದಲ್ಲಿ ಮತಗಳ್ಳತನಕ್ಕೆ ಬಿಹಾರ, ಜಾರ್ಖಂಡ್, ದೆಹಲಿ, ಉತ್ತರ ಪ್ರದೇಶದ ಫೋನ್ ನಂಬರ್‌ಗಳನ್ನ ಬಳಸಿರೋದು ನಮಗೆ ಗೊತ್ತಾಗಿದೆ. ನಾವು ಎಲೆಕ್ಷನ್ ಕಮೀಷನ್‌ನಿಂದ ಮಾಹಿತಿ ಕೇಳಿದ್ರೆ ಅವರು ನಮ್ಮಿಂದ ಮಾಹಿತಿ ಕೇಳ್ತಾರೆ. ಆದ್ದರಿಂದಲೇ ಲೋಕಲ್ ಬಾಡಿ ಚುನಾವಣೆ ಬ್ಯಾಲೆಟ್ ಪೇಪರ್ ನಲ್ಲೇ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
1.12 ಕೋಟಿ ಸಹಿ ಸಂಗ್ರಹ
ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಅಭಿಯಾನ ಮಾಡಿದ್ದೇವೆ. ಈಗ ಸಹಿ ಸಂಗ್ರಹ ಅಭಿಮಾನ ಆರಂಭಿಸಿದ್ದು, ಸಿಎಂ, ನಾನು ಸಹ ಅಭಿಯಾನದಲ್ಲಿ ಸಹಿ ಹಾಕಿದ್ದೇವೆ. ಒಟ್ಟಾರೆ 1 ಕೋಟಿ 12 ಲಕ್ಷದ 41 ಸಾವಿರ ಸಹಿ ಸಂಗ್ರಹ ಮಾಡಲಾಗಿದೆ. ಮೊಬೈಲ್ ನಂಬರ್ ಸಮೇತ ಸಹಿ ಸಂಗ್ರಹ ಆಗಿದೆ. ಮುಂದೆ ರಾಮಲೀಲಾ ಮೈದಾನದಲ್ಲಿ ಬೃಹತ್ ಸಭೆಯಿದೆ. ಅಷ್ಟರಲ್ಲಿ ಎಷ್ಟು ಆಗುತ್ತೋ ಅಷ್ಟು ತಲುಪಿಸಬೇಕು ಎಂದು ತಿಳಿಸಿದರು.


