ನವದೆಹಲಿ: ಕರ್ನಾಟಕ ಕಾಂಗ್ರೆಸ್‍ನ ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಡಿ ಬಂಧನಕ್ಕೊಳಗಾಗಿದ್ದಾರೆ. ರಾತ್ರಿಯೇ ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದುಕೊಂಡು ಹೋಗಿದ್ದರು. ರಾತ್ರಿ ಸುಮಾರು 9.45ಕ್ಕೆ ಆಸ್ಪತ್ರೆಯ ಒಳಗೆ ಹೋದ ಡಿ.ಕೆ.ಶಿವಕುಮಾರ್ ಅವರನ್ನು ಹೊರ ಕರೆ ತಂದಿಲ್ಲ.
ಹೈಶುಗರ್ ಮತ್ತು ಲೋ ಬಿಪಿಯಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ಅವರ ರಕ್ತಪರೀಕ್ಷೆಯನ್ನು ವೈದ್ಯಾಧಿಕಾರಿಗಳು ನಡೆಸಿದ್ದಾರೆ. ಎಲ್ಲ ವೈದ್ಯಕೀಯ ಪರೀಕ್ಷೆಗಳ ಬಳಿಕ ಡಿ.ಕೆ.ಶಿವಕುಮಾರ್ ಅವರನ್ನು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರನ್ನು ಮೊದಲು ಆರ್‍ಎಂಎಲ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ತೀವ್ರ ಬಿಪಿ ಶುಗರ್ ಮತ್ತು ಎದೆ ನೋವಿನಿಂದ ಬಳಲುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ಸಲ ಚೆಕಪ್ ಮಾಡಿ, ಆರೋಗ್ಯ ಸ್ಥಿರವಾಗಿದ್ದಲ್ಲಿ ಇಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ. ಡಿಕೆಶಿಯವರ ಆರೋಗ್ಯ ಹತೋಟಿಯಲ್ಲಿದ್ರೆ, ಅವರನ್ನು ಕಸ್ಟಡಿಗೆ ಪಡೆದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಇತ್ತ ಸೋದರ, ಸಂಸದರಾಗಿರುವ ಡಿ.ಕೆ.ಸುರೇಶ್ ಸಹ ಅಣ್ಣನೊಂದಿಗೆ ಆಸ್ಪತ್ರೆಯಲ್ಲಿಯೇ ಇದ್ದಾರೆ.