ಬೆಂಗಳೂರು: ಇಡೀ ದೇಶವೇ ಕೊರೊನಾ ಭೀತಿಯಿಂದ ಕಂಗೆಟ್ಟಿದೆ. ರಾಜ್ಯ ಸರ್ಕಾರ ಜನತಾ ಕಫ್ರ್ಯೂಗೆ ಬೆಂಬಲಿಸಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತ್ರ ಮನೆ ಮುಂದೆ ನೂರಾರು ಬೆಂಬಲಿಗರನ್ನ ಸೇರಿಸಿಕೊಂಡು ಮಾತನಾಡಿಸಲು ಮುಂದಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಮನೆ ಮುಂದೆ ಇಂದು ಬೆಳಗ್ಗೆ ಬೆಂಬಲಿಗರ ಹಾಗೂ ಕಾರ್ಯಕರ್ತರ ಅಂಧ ದರ್ಬಾರ್ ನಡೆಯುತ್ತಿತ್ತು. ಡಿಕೆಶಿ ಮನೆ ಮುಂದೆ ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಮನೆ ಮುಂದೆ ಗಂಟೆಗಟ್ಟಲೆ ಗುಂಪು ಸೇರಿದ್ದರು. ಇಷ್ಟೆಲ್ಲ ಜನ ಸೇರಿದ್ದರೂ ಎಲ್ಲರನ್ನು ಭೇಟಿ ಮಾಡುವುದಾಗಿ ಹೇಳಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾಯಿಸಿದ್ದರು.
ಕೆಲವರು ಆಪ್ತರು ಈ ರೀತಿ ಜನರ ಭೇಟಿ ಬೇಡ ಎಂದರೂ ಮನೆ ಬಳಿ ಯಾರೂ ಬರಬೇಡಿ ಅನ್ನೋ ಯಾವುದೇ ಪ್ರಕಟಣೆ ಹೊರಡಿಸದ ಡಿಕೆಶಿಗಾಗಿ ಜನ ಕಾಯುತ್ತಲೇ ಇದ್ದರು. ತಡವಾಗಿ ಎಚ್ಚೆತ್ತ ಡಿಕೆಶಿ ಕೊರೊನಾ ಭೀತಿಗೆ ಹೆದರಿ ಸ್ವತಃ ಮೈಕ್ ಹಿಡಿದು ಪ್ರಕಟಣೆ ಮಾಡಿದರು. ಯುಗಾದಿ ಹಬ್ಬ ಮುಗಿಯೋವರೆಗೆ ಯಾರೂ ನನ್ನ ಭೇಟಿಗೆ ಬರಬೇಡಿ. ನಿಮ್ಮ ಅಭಿಮಾನಕ್ಕೆ ನಾನು ಅಭಾರಿಯಾಗಿದ್ದೇನೆ. ನಮ್ಮ ಜವಾಬ್ದಾರಿಗಳನ್ನ ನಾವು ನಿಭಾಯಿಸಬೇಕು. ಅದನ್ನ ಮಾಡೋಣ ಎಂದರು.
ಕೊರೊನಾ ವಿಚಾರದಲ್ಲಿ ಏನು ಮುಂಜಾಗ್ರತೆ ವಹಿಸಬೇಕು ಅದನ್ನ ವಹಿಸೋಣ. ಹಬ್ಬ ಮುಗಿದ ಮೇಲೆ ಕೊರೊನಾ ಕಡಿಮೆಯಾದ್ರೆ ನೋಡೋಣ. ಕೊರೊನಾ ಕಡಿಮೆಯಾದ ನಂತರ ಜಿಲ್ಲಾ ಪ್ರವಾಸ ಮಾಡುತ್ತೇನೆ. ಈ ಸಮಸ್ಯೆ ದೂರವಾಗುವವರೆಗೆ ಯಾರೂ ಕೂಡ ನಮ್ಮ ನಿವಾಸದತ್ತ ಬರಬೇಡಿ ಎಂದು ಪ್ರಕಟಣೆ ಮಾಡಿ ಎಲ್ಲರನ್ನು ಕಳುಹಿಸಿ ಕೊಟ್ಟಿದ್ದಾರೆ.