Connect with us

Bengaluru City

ಹಿಂದೆ ನಾನು ಜೈಲು ಮಂತ್ರಿ ಆಗಿದ್ದೆ, ನನಗೊಂದು ಕುರ್ಚಿ ಕೊಡಿ: ನ್ಯಾಯಾಧೀಶರಲ್ಲಿ ಡಿಕೆಶಿ ಮನವಿ

Published

on

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಜೈಲಿನಲ್ಲಿ ಕುಳಿತುಕೊಳ್ಳಲು ಕುರ್ಚಿ ಬೇಕು ಎಂದು ನ್ಯಾಯಮೂರ್ತಿಗಳಿಗೆ ವಿಶೇಷ ಮನವಿಯನ್ನು ಮಾಡಿದ್ದಾರೆ.

ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಡಿಕೆಶಿಯನ್ನು ಇಂದು ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ 10 ದಿನ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿದ್ದು, ಅ.25ರವರೆಗೂ ಡಿಕೆಶಿ ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.

ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಡಿಕೆಶಿ, 30 ವರ್ಷಗಳ ಹಿಂದೆ ನಾನು ಕೂಡ ಜೈಲು ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ನನ್ನದೊಂದು ಚಿಕ್ಕ ಮನವಿ ಇದೆ. ಜೈಲಿನಲ್ಲಿ ಸುಮಾರು 11 ಗಂಟೆ ಹೊರಗಿರಬೇಕು. ಆದರೆ ನನಗೆ ಕೂರಲು ಅಧಿಕಾರಿಗಳು ಅವಕಾಶ ಮಾಡಿಕೊಡುತ್ತಿಲ್ಲ. ನನಗೆ ಬೆನ್ನು ನೋವಿನ ಸಮಸ್ಯೆ ಇದ್ದು, ಕುಳಿತುಕೊಳ್ಳಲು ಚೇರ್ ಕೊಡುವಂತೆ ಜೈಲು ಅಧಿಕಾರಿಗಳಿಗೆ ಕೇಳಿದರೂ ಕೊಡುತ್ತಿಲ್ಲ. ನಾನು ಯಾವುದೇ ಬೇರೆ ವಿಶೇಷ ಸೌಲಭ್ಯವನ್ನು ಕೇಳಿತ್ತಿಲ್ಲ. ಬೆನ್ನು ನೋವಿನ ಕಾರಣದಿಂದ ಚೇರ್ ಕೇಳುತ್ತಿದ್ದೇನೆ ಎಂದು ತಿಳಿಸಿದರು.

ನ್ಯಾಯಾಂಗ ಬಂಧನದಲ್ಲಿರುವ ನನಗೂ ಬಂಧಿಖಾನೆ ನಿಯಮಗಳಿವೆ. ನನಗೆ ಬೇರೆ ಯಾವುದೇ ರಿಯಾಯಿತಿ, ವಿನಾಯಿತಿ ಬೇಡ ಎಂದು ಡಿಕೆಶಿ ನ್ಯಾಯಾಧೀಶರಿಗೆ ತಿಳಿಸಿದ್ದರು. ಡಿಕೆಶಿರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಮನವಿಗೆ ಸಮ್ಮತಿ ಸೂಚಿಸಿದರು. ಅಲ್ಲದೇ ಅವರಿಗೆ ಕುರ್ಚಿಯೊಂದಿಗೆ ಟಿವಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇತ್ತ ನ್ಯಾಯಾಲಯಕ್ಕೆ ಆಗಮಿಸಿದ ಡಿಕೆಶಿ ಅವರನ್ನು ಭೇಟಿ ಮಾಡಲು ಕಾಂಗ್ರೆಸ್‍ನ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಕುಣಿಗಲ್ ಶಾಸಕ ರಂಗನಾಥ್ ಮತ್ತು ಸಂಡೂರು ಶಾಸಕ ತುಕಾರಾಂ ಕೋರ್ಟ್ ಅವರಣಕ್ಕೆ ಆಗಮಿಸಿದ್ದರು. ಅಲ್ಲದೇ ಕನಕಪುರದ ದೇಗುಲಮಠದ ನಿರ್ವಾಣ ಮಹಾ ಸ್ವಾಮಿಗಳು ಕೂಡ ಡಿಕೆಶಿ ಭೇಟಿಗೆ ಆಗಮಿಸಿದ್ದರು. ಆದರೆ ನ್ಯಾಯಾಲಯ ಡಿಕೆಶಿ ಅವರನ್ನು ಭೇಟಿ ಮಾಡಲು ಅವರ ಕುಟುಂಬ ಸದಸ್ಯರು ಹಾಗೂ ನಿರ್ವಾಣ ಮಹಾ ಸ್ವಾಮೀಜಿಗಳಿಗೆ ಮಾತ್ರ ಅವಕಾಶ ನೀಡಿತು. ಹಿರಿಯ ಸ್ವಾಮೀಜಿಗಳನ್ನು ಭೇಟಿ ಮಾಡಿದ ಡಿಕೆಶಿ ಆರ್ಶೀವಾದ ಪಡೆದರು.

ಅಭಿಮಾನಿಗಳ ವಿರುದ್ಧ ಸುರೇಶ್ ಗರಂ: ತಮ್ಮ ನೆಚ್ಚಿನ ನಾಯಕನನ್ನು ನೋಡಲು ಇಂದು ನ್ಯಾಯಾಲಯದ ಆವರಣದಲ್ಲಿ ಡಿಕೆಶಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದರು. ಆದರೆ ನ್ಯಾಯಾಲಯ ಅಭಿಮಾನಿಗಳಿಗೆ ಡಿಕೆಶಿ ಭೇಟಿ ಮಾಡಲು ಅನುಮತಿ ನೀಡಲಿಲ್ಲ. ಈ ವೇಳೆ ಅಭಿಮಾನಿಗಳ ವಿರುದ್ಧ ಗರಂ ಆದ ಸಂಸದ ಡಿಕೆ ಸುರೇಶ್ ಅವರು, ಗುಂಪು ಕಟ್ಟಿಕೊಂಡ ಬಂದಿದ್ದೀರಿ ಆದರೆ ನ್ಯಾಯಾಲಯದಲ್ಲಿ ಶಿಸ್ತು ಕಾಪಾಡಿಕೊಳ್ಳಲಿಲ್ಲ. ಎಲ್ಲರೂ ಸಾಲಾಗಿ ನಿಂತಿದ್ದರೆ ನಿಮ್ಮೆಲ್ಲರಿಗೂ ಡಿಕೆಶಿ ಭೇಟಿ ಆಗಬಹುದಿತ್ತು ಎಂದು ಅಭಿಮಾನಿಗಳಿಗೆ ಹೇಳಿದರು.

Click to comment

Leave a Reply

Your email address will not be published. Required fields are marked *