ಬೆಂಗಳೂರು: ಅತೃಪ್ತ ಶಾಸಕರ ಪರ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು, ಈ ತೀರ್ಪನ್ನು ಸಚಿವ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. ಅಲ್ಲದೆ ಇದೇ ವೇಳೆ ಅತೃಪ್ತ ಶಾಸಕರಲ್ಲಿ ಸಚಿವರು ಮನವಿ ಕೂಡ ಮಾಡಿಕೊಂಡಿದ್ದಾರೆ.
ತೀರ್ಪು ಹೊರ ಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಅದನ್ನು ನಾನು ಸಚಿವ ಅಲ್ಲ ಓರ್ವ ಶಾಸಕನಾಗಿ ಗೌರವಿಸುತ್ತೇನೆ. ನ್ಯಾಯಾಲಯ ಸ್ಪೀಕರ್ ಅಧಿಕಾರ ಏನು ಅನ್ನೋದನ್ನ ಎತ್ತಿ ಹಿಡಿದಿದೆ ಎಂದರು.
Advertisement
Advertisement
ಶಾಸಕರು ಕಲಾಪಕ್ಕೆ ಹೋಗಬಹುದು ಬಿಡಬಹುದು. ಆದರೆ, ಪಕ್ಷದ ಕೈಯಲ್ಲಿ ವಿಪ್ ಇದೆಯಲ್ಲ. ಅನರ್ಹತೆಯೇ ಬೇರೆಯ ಕಾನೂನಾಗಿದ್ದು, ನಾನು ನನ್ನ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
Advertisement
ಮನವಿಯೇನು?
ಬೇರೆಯವರ ನಂಬಿ ಹೋಗಬೇಡಿ. ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ಅನರ್ಹತೆ ಅನ್ನೋದು ಒಂದು ಇದೆ ಅಲ್ವಾ. ಅನರ್ಹ ಆದರೆ ನೀವು ಮತ್ತೆ ಮಂತ್ರಿ ಆಗಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮನ್ನು ಗೆಲ್ಲಿಸಿರುವ ಜನರ ಮುಖ, ನಿಮ್ಮ ಕುಟುಂಬದವರ ಮುಖ ನೋಡಿ ನೀವು ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬೇಡಿ. ವಿಶ್ವಾಸ ಮತದ ಬಗ್ಗೆ ನಾಳೆ ಮಾತನಾಡೋಣ ಎಂದು ಶಾಸಕ ಮಿತ್ರರಲ್ಲಿ ಮನವಿ ಮಾಡುವ ಮೂಲಕ ಡಿಕೆಶಿ ಅವರು ಪರೋಕ್ಷವಾಗಿ ಅನಹರ್ತೆಯ ಭಯ ಹುಟ್ಟಿಸಿದ್ದಾರೆ.
Advertisement
ತೀರ್ಪು ಏನು?
ಗುರುವಾರ ವಿಶ್ವಾಸಮತಯಾಚನೆ ಮಾಡಬಹುದು. ರಾಜೀನಾಮೆ ನೀಡಿರುವ 15 ಶಾಸಕರು ಕಲಾಪಕ್ಕೆ ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಸುಪ್ರೀಂ ಮಧ್ಯಂತರ ಆದೇಶವನ್ನು ಪ್ರಕಟಿಸುವ ಮೂಲಕ ಅತೃಪ್ತರಿಗೆ ಬಿಗ್ ರಿಲೀಫ್ ನೀಡಿದೆ.
ತನ್ನ ಆದೇಶಲ್ಲಿ ಶಾಸಕರ ಅನರ್ಹತೆಯ ಬಗ್ಗೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದ ಕೋರ್ಟ್ ಶಾಸಕರ ರಾಜೀನಾಮೆಯನ್ನು ನಿಗದಿತ ಅವಧಿಯ ಒಳಗಡೆ ಇತ್ಯರ್ಥ ಮಾಡಬೇಕು ಎಂದು ಸ್ಪೀಕರ್ ಅವರಿಗೆ ಸೂಚಿಸಿದೆ. ಈ ಮೂಲಕ ರಮೇಶ್ ಕುಮಾರ್ ಅವರಿಗೆ ಕೋರ್ಟ್ ಪೂರ್ಣ ಅಧಿಕಾರವನ್ನು ನೀಡಿದ್ದು ಸ್ಪೀಕರ್ ರಾಜೀನಾಮೆ ಅಂಗೀಕಾರಿಸುತ್ತಾರೋ ಅಥವಾ ಅನರ್ಹತೆ ನಿರ್ಧಾರ ಪ್ರಕಟಿಸುತ್ತಾರೋ ಎನ್ನುವ ಕುತೂಹಲ ಹೆಚ್ಚಾಗಿದೆ.
ರಾಜೀನಾಮೆ ಅಂಗೀಕರಿಸಿಲ್ಲ ಎಂದು ಸ್ಪೀಕರ್ ವಿರುದ್ಧ 15 ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ಸುಮಾರು 212 ನಿಮಿಷ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರಿದ್ದ ತ್ರಿಸದಸ್ಯ ಪೀಠದ ಎದುರು ಮುಕುಲ್ ರೊಹ್ಟಗಿ, ಅಭಿಷೇಕ್ ಸಿಂಘ್ವಿ, ರಾಜೀವ್ ಧವನ್ ನಡುವೆ ಅಕ್ಷರಶಃ ವಾಗ್ಯುದ್ಧವೇ ನಡೆದಿತ್ತು. ಸುಮಾರು 3 ಗಂಟೆ 45 ನಿಮಿಷಗಳ ವಾದ ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತೀರ್ಪನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿತ್ತು.