– ಬಿಎಸ್‍ವೈ ಕಥೆ ಗೋವಿಂದ ಗೋವಿಂದ!
ಬೆಂಗಳೂರು: ಬಿಜೆಪಿ ಸರ್ಕಾರದ ರಚನೆ ಕುರಿತು ನಮಗೆ ಗೊತ್ತಿಲ್ಲ. ತಾವು ಇಂದು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ಹೇಳಿದ್ದ ಅತೃಪ್ತ ಶಾಸಕರ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಾಕಿರುವ ನಮ್ಮನ್ನೇ ಅವರು ಬಿಡಲಿಲ್ಲ. ಈಗ ಯಡಿಯೂರಪ್ಪರನ್ನ ಬಿಡ್ತಾರೆ ಏನ್ರೀ ಎಂದು ಪ್ರಶ್ನೆ ಮಾಡಿದ್ದಾರೆ.
ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅತೃಪ್ತ ಶಾಸಕರ ಹೇಳಿಕೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮುಂದಿನ ಸಮಯದಲ್ಲಿ ನನ್ನ ಆರೋಗ್ಯ, ಕ್ಷೇತ್ರದ ಜನರ ಕಡೆ ಗಮನ ಕೊಡುತ್ತೇನೆ ಎಂದರು.
Advertisement
Advertisement
ಕಳೆದ 30 ರಿಂದ 40 ವರ್ಷಗಳಿಂದ ಅವರನ್ನು ಸಾಕಿ ಸಲಹಿದ ಕ್ಷೇತ್ರದ ಜನರನ್ನೇ ಅವರು ಬಿಡಲಿಲ್ಲ. ಇನ್ನು ಬಿಎಸ್ ಯಡಿಯೂರಪ್ಪ ಅವರು ತಮ್ಮೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿಲ್ಲ ಎಂದರೆ ಅವರನ್ನೇ ಹರಿದು ನುಂಗಿ ಬಿಡುತ್ತಾರೆ. ಅವರು ಸಿಎಂ ಆಗಬೇಕಾದರೆ 224 ಸ್ಥಾನಗಳಿದ್ದು, ಈಗ 15 ಶಾಸಕರು ಬೆಂಬಲ ನೀಡಬೇಕು. ಸಾಕಿ ಬೆಳೆಸಿದ ನಮ್ಮನ್ನೇ ಅವರು ಬಿಡಲಿಲ್ಲ. ಇನ್ನು ಅವರನ್ನು ಬಿಡುತ್ತರಾ ಎಂದು ಪ್ರಶ್ನಿಸಿದರು.
Advertisement
ನನಗೆ ಯಾವುದೇ ಸ್ಥಾನಮಾನ ಬೇಡ. ಆದರೆ ನನ್ನ ಸ್ನೇಹಿತರು ಹೇಗೆ ಎಂಬುವುದು ನನಗೆ ಗೊತ್ತು. ಒಬ್ಬರಿಗೆ ಬೆಂಗಳೂರು ಸಿಟಿ ಬೇಕು, ಒಬ್ಬರಿಗೆ ಪಿಡಬ್ಲೂಡಿ ಮತ್ತೊಬ್ಬರಿಗೆ ಪವರ್ ಬೇಕು. ಅಮಿತ್ ಶಾ ಹೇಗೆ ಕಂಟ್ರೋಲ್ ಮಾಡುತ್ತಾರೆ ನನಗೆ ಗೊತ್ತಿಲ್ಲ. ಆದರೆ ನಮ್ಮವರ ಬುದ್ಧಿ ನಂಗೆ ಗೊತ್ತಿದೆ. ತೃಪ್ತರಲ್ಲಿ ಕುಮಟಹಳ್ಳಿ ಒಬ್ಬ ಸೈಲೆಂಟ್ ಆಗಿ ಇರುತ್ತಾನೆ. ಅದು ಬಿಟ್ಟು ಇನ್ನುಳಿದವರೋ ಅಬ್ಬಾಬ್ಬ.. ಬಿಎಸ್‍ವೈ ರೊಂದಿಗೆ ಪ್ರಮಾಣವಚನ ಮಾಡಿಕೊಂಡರೆ ಬದುಕಿಕೊಂಡ್ರು ಇಲ್ಲಂದರೆ ಯಡಿಯೂರಪ್ಪ ಗೋವಿಂದ.. ಗೋವಿಂದ.. ಎಂದರು ವ್ಯಂಗ್ಯವಾಡಿದರು.
Advertisement
ಒಂದೊಮ್ಮೆ ಅವರು ತಮ್ಮೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡದಿದ್ದರೆ ಬಿಎಸ್‍ವೈರನ್ನು ಹರಿದು ತಿನ್ನು ಬಿಡುತ್ತಾರೆ. ಮೊದಲೇ ಬಿಎಸ್‍ವೈ ಪ್ಯಾಂಟ್, ಶರ್ಟ್ ಹಾಕುತ್ತಾರೆ. ಅವರು ಮಾಡಲಿಲ್ಲ ಎಂದರೆ ಒಬ್ಬರು ಅವರ ಜೇಬು ಕಿತ್ತರೆ ಮತ್ತೊಬ್ಬರು ಶರ್ಟ್ ಹರಿದು ತಿನ್ನುತ್ತಾರೆ. ನಮ್ಮ ಸ್ನೇಹಿತರ ಬಗ್ಗೆ ನಮಗೇ ತಿಳಿದಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ, ಆರ್ ವಿ ದೇಶಪಾಂಡೆ, ಹೆಚ್ ಕೆ ಪಾಟೀಲ್ ನಡುವೆ ಪೈಪೋಟಿ ಇದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನನಗೆ ಅಧಿಕಾರ ಆಸೆ ಇಲ್ಲ. ಯಾವ ಸ್ಥಾನಮಾನದ ಆಸೆಯೂ ಇಲ್ಲ. ಈಗ ಕೊಟ್ಟಿದ್ದ ಒಂದು ಮಂತ್ರಿ ಸ್ಥಾನ ಹೋಯ್ತು. ನನಗೆ ಆರೋಗ್ಯ ಕಡೆ ಗಮನ ಕೊಡಬೇಕಾಗಿದೆ ಎಂದರು.
ಮೈತ್ರಿ ಮುಂದುವರಿಯುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮೈತ್ರಿ ಮಾಡಿಕೊಳ್ಳಲು ಹೇಳಿದ್ದು ರಾಹುಲ್ ಗಾಂಧಿ. ಇಲ್ಲಿ ದೇವೇಗೌಡರು ಇದ್ದು ಅವರೇ ನಿರ್ಧಾರ ಮಾಡಲಿ. ಒಟ್ಟು 14 ತಿಂಗಳು ಕೆಲಸ ಮಾಡಿ, ಹೋರಾಟ ಮಾಡಿದ್ದೇವೆ. ಈಗ ಯಾರೋ ಸರ್ಕಾರ ಉರುಳಿಸಿದರು ಎಂದು ಹೇಳಿ ರಂಪ ಮಾಡಲು ಸಾಧ್ಯವಿಲ್ಲ. ಇದನ್ನು ನೋಡಿದರೆ ಜನರು ಉಗಿಯುತ್ತಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ನನಗೆ ಗೊತ್ತಿಲ್ಲ ಎಂದರು.