– ಬಿಎಸ್‍ವೈ ಕಣ್ಣೀರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ
ಹಾವೇರಿ: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಈಗ ಯಾವ ನದಿ, ಯಾವ ಡ್ಯಾಂ, ಯಾವ ಸಮುದ್ರಕ್ಕೆ ಎಸೆದಿದ್ದೀರಿ ಎಂದು ಬಿಜೆಪಿ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನಲ್ಲಿ ಕೆಲವರಕೊಪ್ಪದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕಟ್ಟಿ ಕೆಆರೆಸ್ ಡ್ಯಾಂಗೆ ಎಸೆದಿದ್ದಾರೆ ಎಂದು ಅಭ್ಯರ್ಥಿ ಶಿವರಾಜ್ ಸಜ್ಜನ ಸೇರಿದಂತೆ ಬಿಜೆಪಿ ಮುಖಂಡರು ಟೀಕೆ ಮಾಡಿದ್ದ ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲೇ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.
Advertisement
Advertisement
ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರದ ಹೆಬ್ಬಾಗಿಲು ತೆರೆದಿದ್ದೇ ಯಡಿಯೂರಪ್ಪನವರು ಎಂದು ಹೇಳುತ್ತಿದ್ದ ಬಿಜೆಪಿಯವರು ಅವರನ್ನು ಈಗೇಕೆ ಹೀನಾಯವಾಗಿ ನಡೆಸಿಕೊಂಡರು? ಅವರನ್ಯಾಕೆ ಮೂಲೆಗುಂಪು ಮಾಡಿದರು? ಅವರು ಕಣ್ಣೀರು ಹಾಕಿಕೊಂಡು ಮನೆಗೆ ಹೋಗುವಂತೆ ಮಾಡಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಡಿಕೆಶಿ ಪ್ರಶ್ನಿಸಿದರು. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ
Advertisement
Advertisement
ಯಡಿಯೂರಪ್ಪ ಅವರ ಕಣ್ಣೀರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸರ್ಕಾರ ಅವರ ಕಣ್ಣೀರಿನಲ್ಲೇ ಕೊಚ್ಚಿಕೊಂಡು ಹೋಗುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ನಾಡಿಗೆ ಒಂದು ಶಾಪ. ಕರ್ನಾಟಕದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿ ಆದರೆ ಇಲ್ಲಿ ಕಲ್ಲಿದ್ದಲ ಕೊರತೆ ಇದೆ. ಕರ್ನಾಟಕದವರೇ ಕೇಂದ್ರದಲ್ಲಿ ಗೊಬ್ಬರದ ಮಂತ್ರಿ ಆದರೆ ಕರ್ನಾಟಕದಲ್ಲಿ ಗೊಬ್ಬರದ ಕೊರತೆ ಇದೆ, ಜೊತೆಗೆ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರು, ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲಾಗಲಿ, ಆರ್ಥಿಕ ಅನುದಾನವಾಗಲಿ, ನೆರೆ ಪರಿಹಾರವಾಗಲಿ ಬರಲಿಲ್ಲ. ಇದು ನಮ್ಮ ರಾಜ್ಯದ ಹಣೆಬರಹ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ದೀಪಿಕಾರಂತೆ ಕ್ಯೂಟ್ ಮಗು ಬೇಕು: ರಣವೀರ್ ಸಿಂಗ್
ಸಿಎಂ ಬಸವರಾಜ ಬೊಮ್ಮಾಯಿ ಅವರು ವೀರಾವೇಶದಿಂದ ಮಾತಾಡಿದ್ದಾರೆ. ಕ್ಷೇತ್ರದಲ್ಲಾಗಿರೋ ಅಭಿವೃದ್ಧಿ ಕೆಲಸ ನೋಡಿ ಎಂದು ಸವಾಲು ಹಾಕಿದ್ದಾರೆ. ನೋಡೋಣ ಎಂದು ಈಗ ನಿಮ್ಮೂರಿಗೆ ಕಾರಿಳಿದು ನಡೆದುಕೊಂಡೇ ಬಂದೆ. ರೋಡ್ ಕಣಿವೆ ಇದ್ದಂತಿದೆ. ಅದಕ್ಕೆ ನೀವೇ ಸಾಕ್ಷಿ. ಇದೇನಾ ಅಭಿವೃದ್ಧಿ ಕೆಲಸ ಅಂದ್ರೆ? ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ, ಹಿಂದಿನ ಸಿಎಂ ಯಡಿಯೂರಪ್ಪನವರು 1800 ಕೋಟಿ ರುಪಾಯಿ ಕೊರೋನಾ ಪ್ಯಾಕೇಜ್ ಅನೌನ್ಸ್ ಮಾಡಿದ್ದರು. ನಿಮ್ಮ ಅಕೌಂಟ್ ಗೇನಾದರೂ ಪರಿಹಾರದ ಹಣ ಬಂತಾ? ಸತ್ತವರ ಕುಟುಂಬಗಳಿಗೇನಾದರೂ ಪರಿಹಾರ ಬಂತಾ? ರೈತರಿಗೆ ಬೆಳೆ ಹಾನಿ ಹಣ ಬಂತಾ? ಹೆಕ್ಟೇರಿಗೆ 10 ಸಾವಿರ ರು ಪರಿಹಾರ ಘೋಷಣೆ ಮಾಡಿದ್ದರು. ಅಂದರೆ ಕುಂಟೆಗೆ 100 ರುಪಾಯಿ. ಇದಕ್ಕೆ ಯಾರಾದರೂ ಆನ್ ಲೈನ್ ನಲ್ಲಿ ಅರ್ಜಿ ಹಾಕ್ತಾರಾ? ಎಂಜಿನಿಯರಿಂಗ್ ಪದವೀಧರ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಬೇಕು.
ದೇವರು ಸಿ.ಎಂ. ಉದಾಸಿ ಅವರನ್ನು ಬೇಗನೆ ಕರೆಸಿಕೊಂಡಿದ್ದಾನೆ. ನಾನು ಅವರನ್ನು ತಕ್ಕಮಟ್ಟಿಗೆ ಬಲ್ಲೆ. ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದೆ. ಬಹಳ ಸಜ್ಜನ ವ್ಯಕ್ತಿತ್ವ ಅವರದು. ಅವರ ಮೇಲೆ ದೂಷಣೆ ಮಾಡಲು ನಾನಿಲ್ಲಿಗೆ ಬಂದಿಲ್ಲ. ಅವರ ವಿರುದ್ಧ ನಮ್ಮ ಶ್ರೀನಿವಾಸ ಮಾನೆ ಅವರು ಸೋತಿದ್ದರೂ ಸಹ ಆಗಾಗ್ಗೆ ಅವರ ಆರೋಗ್ಯ ವಿಚಾರಿಸುತ್ತಿದ್ದೆ. ಅವರೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ನಮ್ಮ ಉದಾಸಿ ಅವರ ಮನಸ್ಸಿಗೆ ಇದ್ದ ನೋವೇನೆಂದರೆ, ಅಷ್ಟು ಹಿರಿಯ ನಾಯಕರಾದರೂ ತಮ್ಮನ್ನು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವಲ್ಲಾ ಅಂತಾ. ಅವರನ್ನೇಕೆ ಮಂತ್ರಿ ಮಾಡಲಿಲ್ಲ ಎಂದು ಬೊಮ್ಮಾಯಿ ಅವರನ್ನು ಕೇಳಲು ಬಯಸುತ್ತೇನೆ. ಇದೇ ಕೊರಗಿನಲ್ಲಿ ಉದಾಸಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂಬುದು ನನ್ನ ಭಾವನೆ. ವ್ಯಕ್ತಿ ಸತ್ತಮೇಲೆ ಅವರನ್ನು ಹೊಗಳುವುದಲ್ಲ, ಆತ ಬದುಕಿದ್ದಾಗ ನೀವು ಅವರನ್ನು ಯಾವ ರೀತಿ ಗೌರವಿಸಿದಿರಿ ಎಂಬುದು ಮುಖ್ಯ. ಎಂದು ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ ಕೊಟ್ಟರಾ? ಬೀದಿ ವ್ಯಾಪಾರಿಗಳಿಗೆ ಪರಿಹಾರ ಕೊಟ್ಟರಾ? ಚಿಕಿತ್ಸೆಯಿಂದ ಆಕ್ಸಿಜನ್ ವರೆಗೂ ಎಲ್ಲದಕ್ಕೂ ಕ್ಯೂ ನಿಲ್ಲುವಂತೆ ಮಾಡಿದರು. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಇಲಿಗಳಂತೆ ವಿಲ, ವಿಲ ಒದ್ದಾಡಿ ಪ್ರಾಣ ಬಿಟ್ಟರು. ಒಬ್ಬ ಶಾಸಕ, ಮಂತ್ರಿ ಅವರನ್ನು ಭೇಟಿ ಮಾಡಿ ಸಹಾಯ ಮಾಡಲಿಲ್ಲ. ನಾನು, ಸಿದ್ದರಾಮಯ್ಯ ಹಾಗೂ ಧೃವನಾರಾಯಣ್ ಅವರು ಹೋಗಿ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ರಾಜ್ಯ ಸರಕಾರದವರು ಕೇಂದ್ರಕ್ಕೆ ಆಕ್ಸಿಜನ್ ಸಮಸ್ಯೆಯಿಂದ ಒಬ್ಬರೂ ಸತ್ತಿಲ್ಲ ಎಂದು ವರದಿ ಕೊಟ್ಟಿದ್ದಾರೆ. ನಾವು ನಿಮ್ಮ ಪರವಾಗಿ ಮನೆ, ಮನೆಗೂ ಹೋಗಿ ಅವರಿಗೆ 1 ಲಕ್ಷ ರು. ನೆರವು ನೀಡಿ, ಸಾಂತ್ವನ ಹೇಳಿದ್ದೇವೆ. ರಾಜ್ಯದುದ್ದಗಲಕ್ಕೂ ನಮ್ಮ ಪಕ್ಷದ ಕಾರ್ಯಕರ್ತರು ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ.