ಹಾಸನ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿರುವ ಹೊತ್ತಿನಲ್ಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಸಂಕಲ್ಪ ಪೂಜೆ ನೆರವೇರಿಸಿದ್ದಾರೆ.
ಹಾಸನ (Hassan) ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಯಾದಪುರದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಅವರ ಉತ್ಸವಮೂರ್ತಿಯನ್ನ ನಿನ್ನೆ ರಾತ್ರಿ ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡು ಕುಟುಂಬಸ್ಥರೊಂದಿಗೆ ಸಂಕಲ್ಪ ಪೂಜೆ ಸಲ್ಲಿಸಿದ್ದಾರೆ. ಅರ್ಚಕ ಯತೀಶ್ ನೇತೃತ್ವದ ತಂಡ ಬಸ್‌ನಲ್ಲಿ ಅಡ್ಡಪಲ್ಲಕ್ಕೆಯಲ್ಲಿ ಉತ್ಸವಮೂರ್ತಿಯನ್ನು ಕೊಂಡೊಯ್ದ ಪೂಜೆ ಸಲ್ಲಿಸಿದ್ದಾರೆ.

ಜು.26 ರಂದು ಡಿಶಿಎಂ ಡಿಕೆಶಿ ಜೇನುಕಲ್ಲು ಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದ್ದರು. ಆದಾದ ಬಳಿಕ ಮನಗೆ ಅಡ್ಡಪಲ್ಲಕ್ಕಿಯಲ್ಲಿ ಉತ್ಸವಮೂರ್ತಿ ತಂದು ಸಂಕಲ್ಪ ಪೂಜೆ ಮಾಡಲು ದೇವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅಜ್ಜಯ್ಯ ಒಪ್ಪಿಗೆ ನೀಡಿದ್ದರು. ಇಂದು ಬೆಳಗ್ಗೆ ಕಾರ್ಯಾಲಯಕ್ಕೆ ಉತ್ಸವಮೂರ್ತಿಯನ್ನ ವಾಪಾಸ್ ತರಲಾಯಿತು.

ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಬೇಡಿದ್ದನ್ನು ಕರುಣಿಸುತ್ತಾರೆ ಎಂಬ ಬಲವಾದ ನಂಬಿಕೆ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೇವಾಲಯಕ್ಕೆ ಬಂದು ದೇವರ ಬಳಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದರು. ಅದು ಈಡೇರುವ ಸಮಯ ಬಂದಿರಬಹುದು ಅಥವಾ ಈಡೇರಿರಬಹುದು ಹಾಗಾಗಿ ಸಂಕಲ್ಪ ಪೂಜೆ ಮಾಡಿದ್ದಾರೆ ಎಂದು ಅರ್ಚಕ ಯತೀಶ್ ತಿಳಿಸಿದ್ದಾರೆ.
