ಉಡುಪಿ: ಆಸ್ಕರ್ ಫೆರ್ನಾಂಡಿಸ್ ರಂತಹ ಸಜ್ಜನ ರಾಜಕಾರಣಿ ದೇಶದ ಉದ್ದಗಲ ಎಲ್ಲೂ ಇಲ್ಲ. ಆಸ್ಕರ್ ಒಬ್ಬ ಅಜಾತಶತ್ರು ರಾಜಕಾರಣಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆನೆದರು.
ಆಸ್ಕರ್ ಫೆರ್ನಾಂಡಿಸ್ ಅವರ ಅಂತಿಮ ದರ್ಶನ ಪಡೆದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಕರ್ ಅವರ ಪಕ್ಷದ ಮೇಲಿದ್ದ ಪ್ರಾಮಾಣಿಕತೆ, ನಿಷ್ಠೆ ದೇಶ ಮೆಚ್ಚುವಂತಹದ್ದು. ಪಕ್ಷ ಸದೃಢ ಆಗಿದ್ದಾಗ ಎಲ್ಲರೂ ಮುಂದೆ ಬಂದು ನಾಯಕತ್ವ ವಹಿಸುತ್ತಾರೆ. ಸಂಕಷ್ಟ ಕಾಲದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಆಸ್ಕರ್ ಕೇಂದ್ರಕ್ಕೂ ರಾಜ್ಯಕ್ಕೂ ಇದ್ದ ದೊಡ್ಡ ರಾಜಕೀಯ ಕೊಂಡಿ. ಬೆಂಗಳೂರು ಮೈಸೂರು ದಶಪಥ ರಸ್ತೆಗೆ ಆಸ್ಕರ್ ಕಾರಣ. ಅವರ ಮುತುವರ್ಜಿಯಿಂದ ಈ ಬೃಹತ್ ಯೋಜನೆ ಕಾರ್ಯರೂಪಕ್ಕೆ ಬಂದಿತು ಎಂದರು. ಇದನ್ನೂ ಓದಿ: ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಸಮಾಗಮ
ಯುಪಿಎ ಸರ್ಕಾರದ ಅವಧಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಕರ್ ಫೆರ್ನಾಂಡಿಸ್ ಒಂದು ಯೋಜನೆಯನ್ನು ಜಾರಿಗೆ ತಂದು, ಕಾರ್ಮಿಕರ ಮಕ್ಕಳು ಎಂಬಿಬಿಎಸ್ ಓದಲು ಕಾರಣರಾದರು. ಇಂದಿಗೂ ಕೂಡ ಬಡ ಮಕ್ಕಳು ಎಂಬಿಬಿಎಸ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ
ಫೆರ್ನಾಂಡಿಸ್ ರ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ. ಆಸ್ಕರ್ ನಿಧನದಿಂದ ರಾಷ್ಟ್ರ ಕಾಂಗ್ರೆಸ್‍ಗೆ ನಷ್ಟ ಆಗಿದೆ. ಅಗಲಿನ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇನೆ. ಆಸ್ಕರ್ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಡಿಕೆಶಿ ಪ್ರಾರ್ಥನೆ ಮಾಡಿದರು.