ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದರು.
Advertisement
ಈ ವೇಳೆ ರಂಭಾಪುರಿ ಶ್ರೀಗಳು ಡಿ.ಕೆ.ಶಿವಕುಮಾರ್ ಅವರಿಗೆ ರಂಭಾಪುರಿ ಮಠದ 119ನೇ ಜಗದ್ಗುರುಗಳಾದ ವೀರ ಗಂಗಾಧರ ಶ್ರೀಗಳ ಫೋಟೋವನ್ನು ಉಡುಗೊರೆಯಾಗಿ ನೀಡಿದರು. ಆಗ ಡಿ.ಕೆ.ಶಿವಕುಮಾರ್ ಜೊತೆಗಿದ್ದ ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮತ್ ಜೊತೆ ಮಾತನಾಡಿ, ರೀ, ಅಧ್ಯಕ್ಷರೇ, ಇವರೇ ನಮ್ಮ ಹೈಕಮಾಂಡ್, ಇವರ ಫೋಟೋವನ್ನು ನಮ್ಮ ಕೆಪಿಸಿಸಿ ಕಚೇರಿಯ ನನ್ನ ಕೊಠಡಿಯಲ್ಲಿ ಹಾಕಬೇಕು, ಅದು ನಿಮ್ಮ ಜವಾಬ್ದಾರಿ ಎಂದು ಫೋಟೋವನ್ನು ಮುಟ್ಟಿ ತೋರಿಸಿದರು.
Advertisement
ಶ್ರೀಗಳ ಆಶೀರ್ವಾದದ ಬಳಿಕ ಬಾಳೆಹೊನ್ನೂರು ಸಮೀಪದ ಬಾಸಾಪುರ ತೋಟದಲ್ಲಿ ನಡೆಯುತ್ತಿದ್ದ ತಮ್ಮ ಪಕ್ಷದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮಗಳ ಮದುವೆಯಲ್ಲಿ ಭಾಗಿಯಾಗಿ, ನೂತನ ವಧುವರರಿಗೆ ಶುಭ ಕೋರಿದರು.
Advertisement
Advertisement
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕೊರೊನಾದಿಂದ ರಾಜ್ಯಾದ್ಯಂತ ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ, ಸರ್ಕಾರ ಎಲ್ಲ ಬ್ಯಾಂಕುಗಳ ಇ.ಎಮ್.ಐಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು. ಜನಸಾಮಾನ್ಯರಿಗೆ ಆರ್ಥಿಕವಾಗಿ ಉಸಿರಾಡಲು ಆಗುತ್ತಿಲ್ಲ. ವ್ಯಾಪಾರಿಗಳು, ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟದಲ್ಲಿದ್ದು, ಬ್ಯಾಂಕುಗಳಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಪವಿತ್ರ ಕೆಲಸವನ್ನು ರಾಜ್ಯ ಸರ್ಕಾರ ತುರ್ತಾಗಿ ಮಾಡಬೇಕು ಎಂದರು.