– ಕಾರ್ಖಾನೆ ಮಾಲೀಕರನ್ನ ಬಿಡುತ್ತೇವೆ ಹೊರತು ರೈತರನ್ನ ಬಿಡುವ ಪ್ರಶ್ನೆಯೇ ಇಲ್ಲ
– ಡಿಕೆಶಿ ಸಂಧಾನಕ್ಕೆ ಬಗ್ಗಿ ರೈತರ ಪ್ರತಿಭಟನೆ ವಾಪಸ್
ಬೆಳಗಾವಿ: ಬಳ್ಳಾರಿಯಲ್ಲಿ ಗಣಿಧಣಿಗಳ ಕೋಟೆಯನ್ನು ಉರುಳಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಈಗ ಜಾರಕಿಹೊಳಿ ಸಹೋದರರ ಕೋಟೆಗೆ ಲಗ್ಗೆ ಇಟ್ಟು ಯಶಸ್ವಿಯಾಗಿದ್ದಾರೆ. ನಾಲ್ಕು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮನ ಒಲಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಡಿಕೆಶಿ ಸಮಾಧಾನ ಮಾಡಿದ್ದಾರೆ. ರೈತರು ಕೂಡ ಡಿಕೆಶಿ ಅವರ ಮಾತಿಗೆ ಬೆಲೆಕೊಟ್ಟು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಈ ವೇಳೆ ಹೋರಾಟ ನಡೆಸುತ್ತಿದ್ದ ರೈತರು ಡಿ.ಕೆ.ಶಿವಕುಮಾರ್ ಅವರಲ್ಲಿ ಸಚಿವ ಜಾರಕಿಹೊಳಿ ಮತ್ತು ಡಿಸಿ ಬೊಮ್ಮನಹಳ್ಳಿ ವಿರುದ್ಧ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ನಾವೂ ಪ್ರತಿ ಸಲ ಡಿಸಿ ಅವರಿಗೆ ಮನವಿ ಕೊಡಬೇಕೇ? ನ್ಯಾಯಕ್ಕಾಗಿ ಸಾಯುವವರೆಗೂ ಮನವಿ, ಅರ್ಜಿ ಕೊಡುತ್ತಾ ಇರಬೇಕು ಎಂದು ಕಬ್ಬಿನ ಹೋರಾಟಗಾರರು ಅಳಲು ತೋಡಿಕೊಂಡಿದ್ದಾರೆ. ಕಬ್ಬಿನ ಬಾಕಿ ಉಳಿದಿರುವ ಹಣವನ್ನ ಕೊಡಿಸಿ, ಅಲ್ಲದೇ ಜಿಲ್ಲಾಡಳಿತಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ರೈತರು ರಾತ್ರೋರಾತ್ರಿ ಬೆಳಗಾವಿಯಲ್ಲಿ ಧರಣಿಯನ್ನು ನಡೆಸುತ್ತಿದ್ದಾರೆ. ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಅದಕ್ಕೆ ಸ್ಪಂದಿಸಬೇಕಾದದ್ದು ನಮ್ಮ ಧರ್ಮ. ಈಗಾಗಲೇ ಮುಖ್ಯಮಂತ್ರಿಗಳು ಮೂರು ದಿನಗಳಿಂದ ಹಗಲು-ರಾತ್ರಿ ಕುಳಿತುಕೊಂಡು ಮಾಲೀಕರು, ಅಧಿಕಾರಿಗಳು ಮತ್ತು ರೈತರ ಬಳಿ ಚರ್ಚೆ ಮಾಡಿದ್ದಾರೆ. ಜೊತೆಗೆ ಇನ್ನೂ 15 ದಿನದ ಒಳಗಡೆ ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.
ಸರ್ಕಾರ ನ್ಯಾಯಬದ್ಧವಾದ ಹಣ, ಬಾಕಿಯನ್ನ ಕೊಡಿಸುವ ಕೆಲಸ ಮಾಡುತ್ತದೆ. ನಮ್ಮ ಸರ್ಕಾರಕ್ಕೆ ರೈತರ ಸಮಸ್ಯೆ ಗೊತ್ತಿದೆ. ಆದರೆ ದುರದೃಷ್ಟಕರ ಸಕ್ಕರೆ ಮಾಲೀಕರು ರೈತರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಯಾವುದೇ ಕಾರಣಕ್ಕೂ ನಾವು ಕಾರ್ಖಾನೆ ಮಾಲೀಕರನ್ನು ಬಿಡುತ್ತೇವೆ ಹೊರತು ರೈತರನ್ನು ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಜೀವನಾಡಿ ರೈತರು, ರೈತರಿಂದಲೇ ನಮ್ಮ ಸರ್ಕಾರ. ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಡಿಕೆಶಿ ಹೇಳಿದರು.
ನಾನು ಕೂಡ ರೈತರ ಮುಖಂಡರ ಜೊತೆ ಮಾತನಾಡಿದ್ದೇನೆ. ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ನಮ್ಮ ಮನವಿಗೆ ರೈತರು ಸ್ಪಂದಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಜೊತೆಗೆ ಕಬ್ಬಿನ ಬಾಕಿ ಬಿಲ್ ಕೊಡಿಸುವ ಭರವಸೆಯನ್ನು ಕೂಡ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv