ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತೆರೆ ಹಿಂದೆಯೇ ಉಪಚುನಾವಣೆ ಗೆಲುವಿಗಾಗಿ ತಂತ್ರಗಳನ್ನು ರಚಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲಿದೆ. ಕಾಂಗ್ರೆಸ್‍ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಉಪಕದನದಲ್ಲಿ ಏಕಾಂಗಿಯಾದ್ರಾ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಹೊಸ ಸುದ್ದಿಯೊಂದು ಕೈ ಅಂಗಳದಿಂದ ಹೊರ ಬಂದಿದೆ. ಜೈಲಿನಿಂದ ಬಂದ ಬಳಿಕ ಡಿಕೆ ಶಿವಕುಮಾರ್ ದೇವಸ್ಥಾನಗಳಿಗೆ ಭೇಟಿ ನೀಡೋದರಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ನಾಲ್ಕು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅಲ್ಲಿಯ ಕ್ಷಣ ಕ್ಷಣದ ಮಾಹಿತಿಗಳನ್ನು ತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ಕ್ಷೇತ್ರದ ಮೇಲೆ ಡಿಕೆ ಕಣ್ಣು: 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಡಿ.ಕೆ.ಶಿವಕುಮಾರ್ ನಾಲ್ಕು ವಿಧಾನಸಭಾ ಕ್ಷೇತ್ರಗಳ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಒಂದೊಂದು ಕ್ಷೇತ್ರದಲ್ಲೂ ತಲಾ 50 ಹುಡುಗರ ಡಿಕೆಶಿವಕುಮಾರ್ ಟೀಂ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಇಂಚಿಂಚೂ ಮಾಹಿತಿ ಟ್ರಬಲ್ ಶೂಟರ್ ಕೈ ತಲುಪುತ್ತಿದೆ. ಹೊಸಕೋಟೆ, ಗೋಕಾಕ್, ಯಶವಂತಪುರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಡಿಕೆಶಿವಕುಮಾರ್ ಚುನಾವಣಾ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ ಎನ್ನಲಾಗಿದೆ.
ಎಂಟಿಬಿ ನಾಗರಾಜ್, ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್ ಮತ್ತು ಸುಧಾಕರ್ ಸೋಲಿಸಲು ಡಿಕೆ ಶಿವಕುಮಾರ್ ಪಣ ತೊಟ್ಟಿದ್ದಾರೆ. ಅನರ್ಹ ಶಾಸಕರು ಚುನಾವಣೆಯಲ್ಲಿ ಬಳಸುವ ತಂತ್ರಗಳನ್ನು ತಿಳಿದುಕೊಳ್ಳಲು ಡಿಕೆಶಿ ತಂಡ ಈಗ ಮುಂದಾಗುತ್ತಿದೆ.