ಬೆಂಗಳೂರು: ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹವಾಲ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವೊಂದು ಈಗ ಕೇಳಿಬಂದಿದೆ.
ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಸೋಮವಾರ ದೂರು ಸಲ್ಲಿಸಿದ್ದರು. ಐಟಿ ಕಾಯಿದೆ ಸೆಕ್ಷನ್ 277, 278, 193, 199, ಹಾಗೂ 120(ಬಿ) ಅಡಿ ಪ್ರಕರಣ ದಾಖಲಾಗಿತ್ತು.
ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದದ ವಿವರವನ್ನು ಉಲ್ಲೇಖಿಸಿದ್ದಾರೆ. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಆರೋಪಗಳೇನು?
ದೆಹಲಿಯ 4 ಫ್ಲಾಟ್ ಗಳ ಮೇಲೆ ನಡೆದ ದಾಳಿಯಲ್ಲಿ 8.59 ಕೋಟಿ ರೂ. ಹಣ ಪತ್ತೆಯಾಗಿದೆ. ಶರ್ಮಾ ಟ್ರಾನ್ಸ್ ಪೋರ್ಟ್ ವ್ಯವಹಾರ ನೋಡಿಕೊಳ್ಳುವ ರಾಜೇಂದ್ರ ಮನೆ ಮೇಲೆ ನಡೆದ ದಾಳಿಯಲ್ಲಿ ಡೈರಿ, ಟಿಪ್ಪಣಿಗಳು ಸಿಕ್ಕಿದೆ. ಎಷ್ಟು ಲಕ್ಷ ರೂ.ಗಳನ್ನು ನೀಡಲಾಗಿದೆ ಎನ್ನುವ ಲೆಕ್ಕದ ವಿಚಾರವನ್ನು ಕೆಜಿಗಳ ಲೆಕ್ಕದಲ್ಲಿ ಡೈರಿನಲ್ಲಿ ನಮೂದಿಸಲಾಗಿದೆ. ಮನೆಯಲ್ಲಿಟ್ಟಿದ್ದ ಹಣವನ್ನು ಎಐಸಿಸಿಗೆ ಕೊಡುವಂತೆ ವಿ.ಮುಳ್‍ಗುಂದ್‍ಗೆ 5 ಕೋಟಿ ರೂ. ಹಣವನ್ನು ರವಾನಿಸಿದ್ದ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಿದೆ. ಈ ಹಣವನ್ನು ಡಿಕೆ ಶಿವಕುಮಾರ್ ಸೂಚನೆ ಮೇರೆಗೆ 3.24 ಕೋಟಿ ರೂ. ಹಣವನ್ನು ಆಂಜನೇಯ ಪಾವತಿಸಿದ್ದಾರೆ. ಸಫ್ದರ್ ಜಂಗ್ ನ 3 ಫ್ಲಾಟ್‍ಗಳು ಅಘೋಷಿತ ಹಣ ಸಂಗ್ರಹಣೆಗೆ ಬಳಕೆಯಾಗಿದೆ ಎಂದು ಐಟಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.
ಸ್ಪಷ್ಟ ಉತ್ತರ ಸಿಕ್ಕಿಲ್ಲ:
ಐಟಿ ದಾಳಿಯಾದ ಬಳಿಕ ಪತ್ತೆಯಾದ ಡೈರಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಡಿಕೆ ಶಿವಕುಮಾರ್ ಮತ್ತು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಕೆಜಿ ಎಂಬ ಕೋಡ್ ವರ್ಡ್ ಬಳಸಿ ನಗದು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಆರೋಪಿಗಳಿಂದ ಸರಿಯಾದ ಉತ್ತರ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಹವಾಲ ಹಣ ಮೇಲೆ ಕಣ್ಣಿಟ್ಟಿರುವ ಐಟಿ ಇಲಾಖೆ ಸದ್ಯ ಲಭ್ಯವಾದ ಮಾಹಿತಿಯ ವರದಿಯನ್ನು ಜಾರಿ ನಿರ್ದೇಶನಾಲಯಗೆ (ಇಡಿ) ಮಂಗಳವಾರವಷ್ಟೇ ರವಾನೆ ಮಾಡಿದೆ.
ಸಮನ್ಸ್ ಜಾರಿ:
ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧ ನ್ಯಾಯಾಲಯದ ನ್ಯಾ.ಎಂ.ಎಸ್. ಆಳ್ವಾ ಅವರು ಡಿಕೆ ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಆಗಸ್ಟ್ 2 ರಂದು ಡಿಕೆಶಿ ಸೇರಿ ಎಲ್ಲಾ ಆರೋಪಿಗಳು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ.
ಈ ಹಿಂದೆ ಡಿ.ಕೆ. ಶಿವಕುಮಾರ್ ಐಟಿ ಇಲಾಖೆ ದಾಖಲಿಸಿದ್ದ ದೂರಿಗೆ ಜಾಮೀನು ಪಡೆದಿದ್ದರು. ಡಿ.ಕೆ.ಶಿವಕುಮಾರ್ ಜೊತೆ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧವೂ ಸಮನ್ಸ್ ಜಾರಿಯಾಗಿದೆ.