ಬೆಂಗಳೂರು: ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲೇ ಡಿ.5ರಂದು ಹಾಸನದಲ್ಲಿ (Hassan) ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ನನ್ನ ನೇತೃತ್ವದಲ್ಲಿಯೇ ಕಾಂಗ್ರೆಸ್ (Congress) ಪಕ್ಷ ವಹಿಸಿಕೊಳ್ಳಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ವೇಳೆ, ಪಕ್ಷದ ಅನೇಕ ನಾಯಕರು ಮುಖಂಡರು ಹಾಸನದಲ್ಲಿ ಸಮಾವೇಶ (Hassan Samavesha) ಮಾಡಲು ತಿಳಿಸಿದ್ದಾರೆ. ನಮ್ಮ ಪಕ್ಷದ ವತಿಯಿಂದ ಸಚಿವರುಗಳು, ಜಿಲ್ಲಾ ಮಂತ್ರಿಗಳು ಸಮಾವೇಶದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಮಾವೇಶಕ್ಕೆ ಅನೇಕ ಸಂಘಟನೆಗಳು ಸಮುದಾಯಗಳು ಬೆಂಬಲ ಸೂಚಿಸಿವೆ. ಇವರ ಬೆಂಬಲವನ್ನು ನಾವು ಸ್ವೀಕರಿಸುತ್ತೇವೆ ಎಂದಿದ್ದಾರೆ.
Advertisement
Advertisement
ನಾನು ನಾಲ್ಕು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದೆ. ಅಲ್ಲದೇ ಮುಖ್ಯಮಂತ್ರಿಗಳು ಸಹ ದೆಹಲಿ ಪ್ರವಾಸದಲ್ಲಿದ್ದರು. ದೇಶದಲ್ಲಾಗುತ್ತಿರುವ ವಿದ್ಯಮಾನ ಹಾಗೂ ಸಂವಿಧಾನ ರಕ್ಷಣೆಗೆ ಕಾರ್ಯಕ್ರಮ ರೂಪಿಸಲು ಎಐಸಿಸಿ ನಾಯಕರು ಮಾರ್ಗದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ನಾಲ್ಕು ಜಿಲ್ಲೆಗಳ ನಾಯಕರು ಹಾಗೂ ಪದಾಧಿಕಾರಿಗಳ ಜೊತೆ ಇದರ ಪೂರ್ವಭಾವಿ ಸಭೆಯನ್ನು ಇಂದು (ಭಾನುವಾರ) ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾಗಿದೆ. ಸಮಾವೇಶಕ್ಕೆ ಪಕ್ಷದ ಎಲ್ಲಾ ನಾಯಕರಿಗೂ ಆಹ್ವಾನ ನೀಡಲಾಗುವುದು. ಸಮಾನತೆ, ಸಂವಿಧಾನದ ಬಗ್ಗೆ ಗೌರವ ಹೊಂದಿರುವವರು, ಸ್ವಾಭಿಮಾನಿಗಳಿಗೆ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಸಧ್ಯದಲ್ಲೇ ನಾನು ಹಾಗೂ ಕೆಪಿಸಿಸಿ ತಂಡ ಸಮಾವೇಶ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ತಯಾರಿಯನ್ನು ಪರಿಶೀಲಿನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಜನರ ಕಲ್ಯಾಣ, ಸಂವಿಧಾನ ರಕ್ಷಣೆ, ಸ್ವಾಭಿಮಾನ ರಕ್ಷಣೆ, ಸರ್ಕಾರದ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಮಾಡಲಾಗುತ್ತಿದೆ. ಸರ್ಕಾರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಜನ ಈಗಾಗಲೇ ತೀರ್ಪು ಕೊಟ್ಟಿದ್ದಾರೆ. ಎಐಸಿಸಿ ನಾಯಕರ ನಿರ್ದೇಶನದಂತೆ ಮುಂದಿನ ಎರಡು ತಿಂಗಳ ಕಾಲ ಒಂದಲ್ಲಾ ಒಂದು ರೀತಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿನ ಯಶಸ್ಸು ಮುಂದುವರೆಸಿಕೊಂಡು ಹೋಗಲು ಪಕ್ಷ ಸಂಘಟನೆ ಮಾಡಲಾಗುವುದು. ಚುನಾವಣೆ ಬಂದಾಗ ಸಿದ್ಧತೆ ಮಾಡಿಕೊಳ್ಳುವುದಲ್ಲ. ಚುನಾವಣೆ ಮುಗಿದ ಮರು ದಿನದಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದಿದ್ದಾರೆ.