ಶಿವಮೊಗ್ಗ: ಇಂದಿನಿಂದ ಶಿವಮೊಗ್ಗ ಲೋಕಸಭಾ ಕಣ ರಂಗೇರಲಿದೆ. ಮೊದಲ ಹಂತದ ಪ್ರಚಾರ ಮುಗಿದ ನಂತರ ಮೈತ್ರಿ ನಾಯಕರು ಶಿವಮೊಗ್ಗ ಲೋಕಸಭಾ ಕ್ಷೇತ್ರದತ್ತ ಚಿತ್ತನೆಟ್ಟಿದ್ದಾರೆ.
ಇಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಜಂಟಿಯಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಇವರ ಜಂಟಿ ಪ್ರಚಾರ ಸೊರಬ ತಾಲೂಕಿನಲ್ಲಿ ಆನವಟ್ಟಿಯಲ್ಲಿ ಆರಂಭಗೊಳ್ಳಲಿದೆ. ನಂತರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಆನವೇರಿಯಲ್ಲಿ ಪ್ರಚಾರ ನಡೆಯಲಿದೆ. ಮಧ್ಯಾಹ್ನ ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರದಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.
Advertisement
ಮೈತ್ರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ನಾಳೆ ಸೊರಬ ಕ್ಷೇತ್ರದ ಆನವೇರಿಯಲ್ಲಿ ಪ್ರಚಾರ ಸಭೆ ಹಮ್ಮಿಕೊಂಡಿದ್ದಾರೆ. ಇದಲ್ಲದೆ, ಅಮಿತ್ ಶಾ ರೋಡ್ ಶೋ, ಸಿದ್ದರಾಮಯ್ಯ, ಎಸ್.ಎಂ ಕೃಷ್ಣ ಇನ್ನಿತರ ಘಟಾನುಘಟಿ ನಾಯಕರು ಶಿವಮೊಗ್ಗ ಜಿಲ್ಲೆಯಲ್ಲಿ ತಂತಮ್ಮ ಅಭ್ಯರ್ಥಿಗಳ ಪರವಾಗಿ ಬ್ಯಾಟಿಂಗ್ ಮಾಡಲಿದ್ದಾರೆ.
Advertisement
Advertisement
ತಮ್ಮ ಮಗ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿಕೊಳ್ಳಲೇ ಬೇಕಾದ ರಾಜಕೀಯ ಅನಿವಾರ್ಯತೆ ಯಡಿಯೂರಪ್ಪ ಅವರಿಗೆ ಇದೆ. ಇದೇ ರೀತಿ ಸೋಲಿನ ಹ್ಯಾಟ್ರಿಕ್ ತಪ್ಪಿಸಿಕೊಳ್ಳಲು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲ್ಲಬೇಕಿದೆ. ಇಬ್ಬರೂ ಮುಖ್ಯಮಂತ್ರಿಗಳ ಮಕ್ಕಳ ಈ ಹೋರಾಟ ರಾಜ್ಯವಷ್ಟೇ ಅಲ್ಲ, ರಾಷ್ಟ್ರದ ಗಮನ ಸೆಳೆದಿದೆ. ಇಲ್ಲಿ ರಾಘವೇಂದ್ರ ಸೋತಲ್ಲಿ ಬಿ.ಎಸ್. ಯಡಿಯೂರಪ್ಪ ರಾಜಕೀಯವಾಗಿ ಮೂಲೆಗುಂಪಾಗುವ ಅಪಾಯ ಇದೆ. ಇದೇ ಪರಿಸ್ಥಿತಿಯಲ್ಲಿ ಮಧು ಬಂಗಾರಪ್ಪ ಅವರೂ ಇದ್ದಾರೆ.
Advertisement
ವಿಧಾನಸಭಾ ಚುನಾವಣೆ, ನಂತರ ಬಂದ ಲೋಕಸಭಾ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೋತಿದ್ದಾರೆ. ಇದಕ್ಕೂ ಮುನ್ನ ಮೂರು ಚುನಾವಣೆ ಸೋತು ಒಟ್ಟು ಐದು ಚುನಾವಣೆಗಳಲ್ಲಿ ಸೋತಿದ್ದಾರೆ. ಈ ಸೋಲಿನ ಸುಳಿಯಿಂದ ಹೊರ ಬರಲು ಮಧು ಹೋರಾಟ ನಡೆಸುತ್ತಿದ್ದಾರೆ.