ನಾವು ಪಾರದರ್ಶಕವಾಗಿದ್ದೇವೆ, ಹವಾಲಾ ಕೊಟ್ಟವರು ಯಾರು? ಕೊಟ್ಟಿದ್ದು ಯಾರಿಗೆ?: ಡಿಕೆ ಸುರೇಶ್ ಪ್ರಶ್ನೆ

Public TV
1 Min Read
dksuresh 001

ರಾಮನಗರ: ರಾಜಕೀಯದ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಹವಾಲಾ ಹಣ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದಲ್ಲಿರುವ ಬಲಿಷ್ಠರನ್ನು ಟಾರ್ಗೆಟ್ ಮಾಡುತ್ತಿದೆ. ಆದರೆ ನಾವು ಅದನ್ನೆಲ್ಲ ಸಮರ್ಪಕವಾಗಿ ಎದುರಿಸುತ್ತೇವೆ ಎಂದರು.

ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಹವಾಲಾ ಹಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ಬಗ್ಗೆ ಸಾಕ್ಷಿ ಬೇಕು. ಹವಾಲಾ ಕೊಟ್ಟವರು ಯಾರು? ಯಾರಿಗೆ ಕೊಟ್ಟರು? ಎಂಬ ಮಾಹಿತಿಯೇ ಇಲ್ಲ. ಕೇವಲ ಡಿ.ಕೆ.ಶಿವಕುಮಾರ್ ಅವರ ಹೆಸರನ್ನ ಕೆಡಿಸಬೇಕೆಂದು ಈ ಹವಾಲಾ ಹೆಸರನ್ನ ಹಾಕುತ್ತಿದ್ದಾರೆ ಎಂದು ದೂರಿದರು.

ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬದವರು ಭಾಗಿಯಾಗಿಲ್ಲ. ಇದು ಕೇವಲ ರಾಜಕೀಯ ಷಡ್ಯಂತ್ರ. ರಾಜಕೀಯ ಉದ್ದೇಶಕ್ಕಾಗಿ ಊಹಾಪೋಹ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕುರಿತಂತೆ ಯಾವುದೇ ಆತಂಕ ಬೇಡ. ನಾವು ಪಾರದರ್ಶಕವಾಗಿದ್ದೇವೆ. ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ಡಿಕೆಶಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ರಾಮನಗರ ಉಪ ಚುನಾವಣೆ ಕುರಿತು ಹೊಂದಾಣಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನೇರವಾಗಿಯೇ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *