ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದು, ಇದೀಗ ಇವರ ಅಕಾಲಿಕ ಮರಣಕ್ಕೆ ಸಚಿವ ಡಿಕೆ ಶಿವಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ.
ಮಧುಕರ್ ಶೆಟ್ಟಿ ನನಗೆ ಹತ್ತಿರದಿಂದ ಪರಿಚಯ. ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಅವರ ನಿಧನ ಸುದ್ದಿ ಕೇಳಿ ಆಶ್ಚರ್ಯವಾಯ್ತು. ಅವರ ನಿಧನ ಸ್ವಾಭಾವಿಕವಾನಾ ಅಂತ ತನಿಖೆ ಮಾಡಬೇಕಾಗಿದೆ. ಅವರೊಬ್ಬ ಗೌರವಾನ್ವಿತ ಅಧಿಕಾರಿಯಾಗಿದ್ರು. ಅವರ ತಂದೆಯೂ ನನಗೆ ಪರಿಚಯವಿದ್ದರು. ಪೊಲೀಸ್ ಇಲಾಖೆಗೆ ಅವರೊಂದು ದೊಡ್ಡ ಆಸ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಕ್ಕೆ ಧೈರ್ಯ ಕೊಡಲಿ ಅಂತ ಡಿಕೆಶಿ ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಒಬ್ಬ ಅಧಿಕಾರಿ ಹೊರ ರಾಜ್ಯದಲ್ಲಿ ನಿಧನ ಹೊಂದಿದ್ರೆ ಆ ಬಗ್ಗೆ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಡಿಕಶಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ
ಸಕಲ ಸರ್ಕಾರಿ ಗೌರವಗಳೊಂದಿಗೆ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ ನಡೆಸಬೇಕು ಅಂತ ಡಿಜಿ ನೀಲಮಣಿ ರಾಜು ಅವರಿಗೆ ಗೃಹ ಸಚಿವ ಎಂಬಿ ಪಾಟೀಲ್ ಅವರು ದೂರವಾಣಿ ಕರೆ ಮಾಡಿ ಸೂಚನೆ ಕೊಟ್ಟಿದ್ದಾರೆ. ಬಳಿಕ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಧುಕರ್ ಶೆಟ್ಟಿಯವರು ಈ ರಾಜ್ಯದ ಒಬ್ಬ ನಿಷ್ಠಾವಂತ, ಪ್ರಾಣಿಕ ಹಾಗೂ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದರು. ಅವರ ನಿಧನ ದುಃಖ ತಂದಿದೆ. ಪೊಲೀಸ್ ಇಲಾಖೆಗೆ ದೊಡ್ಡ ನಷ್ಟವಾಗಿದೆ ಅಂದ್ರು.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಧುಕರ್ ಶೆಟ್ಟಿ ಪಾರ್ಥಿವ ಶರೀರವನ್ನು ಪೊಲೀಸ್ ಇಲಾಖೆ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ತರಲಿದೆ. ಬಳಿಕ ಯಲಹಂಕದ ಪೊಲೀಸ್ ತರಬೇತಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ರಾತ್ರಿ 8.30 ರ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನಂತರ ವಿಮಾನದ ಮೂಲಕ ಮಧುಕರ್ ಶೆಟ್ಟಿ ಅವರ ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ ಎಂದು ತಿಳಿಸಿದ್ರು.
ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 8.15ಕ್ಕೆ ಹೈದ್ರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv