ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನಡುವಿನ ವಾಕ್ ಸಮರದ ಬಗ್ಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್, ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರು, ದೇವೇಗೌಡರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರವರು ಏನೇನು ಮಾತನಾಡಿದ್ದಾರೋ ಅದರ ಬಗ್ಗೆ ನಾನು ಮಾತನಾಡಲ್ಲ. ದೊಡ್ಡವರ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
Advertisement
Advertisement
ನಮಗೆ ರಾಜೀವ್ ಗಾಂಧಿ ಅವರು ರಾಜಕೀಯ ದೀಕ್ಷೆ ನೀಡಿದಾಗ ನೀವು ಈ ರೀತಿ ನಡೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ರಾಜೀವ್ ಗಾಂಧಿಯವರು ತೋರಿಸಿಕೊಟ್ಟ ಮಾರ್ಗ ಮತ್ತು ಕಾಂಗ್ರೆಸ್ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕೆಲಸ ಮಾಡುತ್ತೇವೆ. ನಾವಿನ್ನು ತೀರ್ಮಾನ ಮಾಡುವ ಹಂತಕ್ಕೆ ಬಂದಿಲ್ಲ. ನಾವು ಕೇವಲ ಕಾಂಗ್ರೆಸ್ ಕಾರ್ಯಕರ್ತರು ಅಷ್ಟೆ ಎಂದರು.
Advertisement
ನಮ್ಮಲ್ಲಿರುವ ವಿಶ್ವಾಸ, ಗೌರವ ಬಿಟ್ಟು ಬದಲಾವಣೆ ಮಾಡಿಕೊಳ್ಳಲು ತಯಾರಿಲ್ಲ. ಒಟ್ಟಿಗೆ ಒಂದೇ ಸರ್ಕಾರದಲ್ಲಿ ಕೆಲಸ ಮಾಡಿದ್ದೇವೆ. ಫಲ ಸಿಗಲಿ, ಬಿಡಲಿ ಅದು ಬೇರೆ ವಿಚಾರ. ಯಾರು ಕಾರಣ ಎಂಬುವುದು ಬೇರೆ ವಿಚಾರ. 14 ತಿಂಗಳು ಮೈತ್ರಿ ಸರ್ಕಾರಕ್ಕೆ ಬದ್ಧರಾಗಿದ್ದು, ಒಟ್ಟಿಗೆ ತೀರ್ಮಾನ ತೆಗೆದುಕೊಳ್ಳುತ್ತಿದ್ದೆವು. ಮೈತ್ರಿ ಸರ್ಕಾರ ಪತನವಾದ ನಂತರ ಅದು ಅವರಿಗೆ ಬಿಟ್ಟಿದ್ದು. ಆದರೆ ಸರ್ಕಾರ ಇರುವವರೆಗೂ ಕುಮಾರಸ್ವಾಮಿ ನಿರ್ಧಾರಕ್ಕೆ ಬದ್ಧರಿದ್ದೆವು ಎಂದು ಡಿಕೆಶಿ ಹೇಳಿದರು.
Advertisement
ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ನಾಯಕರು ಕಿರುಕುಳ ನೀಡಿದ್ದಾರೆ ಎಂಬ ಹೇಳಿಕೆಗೆ, ಆ ಬಗ್ಗೆ ಚರ್ಚೆ ಮಾಡೋಣ ಎಂದು ಉತ್ತರಿಸಿದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಸ್ಥಾನಕ್ಕೆ ಅರ್ಜಿ ಹಾಕಿಕೊಂಡು ಓಡಾಡುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.