ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ

Public TV
3 Min Read
RMG DKSHI Christ copy

– ವಿಶ್ವದಲ್ಲೇ ಅತಿ ಎತ್ತರದ ಏಸು ಪ್ರತಿಮೆ

ಬೆಂಗಳೂರು: ಕನಕಪುರದ ಹಾರೋಬೆಲೆಯಲ್ಲಿ ನಿರ್ಮಿಸಲು ಮುಂದಾಗಿರುವ ವಿಶ್ವದ ಎತ್ತರದ ಏಕಶಿಲಾ ಏಸು ಪ್ರತಿಮೆಗೆ ಜಮೀನು ನೀಡಿರುವುದನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಮಾಡಿದ್ದ ಡಿಕೆಶಿ ವಿರುದ್ಧ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು. ತಮ್ಮ ವಿರುದ್ಧದ ಆರೋಪಗಳಿಗೆ ಇಂದು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಎಲ್ಲಾ ಸಮುದಾಯಗಳಿಗೂ ನಾನು ನೆರವಾಗಿದ್ದು, ಅಂಬೇಡ್ಕರ್ ಅವರು ರಚಿಸಿದ್ದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ನೀತಿಪಾಠ ನನಗೆ ಬೇಕಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

DK SHI RMG c copy

ಬಿಜೆಪಿ ನಾಯಕರು ಯಾವಾಗಲೂ ಬೇರೊಬ್ಬರ ವಿಚಾರದಲ್ಲಿ ತಪ್ಪು ಕಂಡು ಹಿಡಿರುವ ಕೆಲಸವನ್ನಷ್ಟೇ ಮಾಡುತ್ತಾರೆ. ಈಗಲೂ ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಕಪಾಲ ಬೆಟ್ಟ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿನ ಜನರು ನನ್ನ ಪರವಾಗಿ ನಿಂತು ಬೆಳೆಸಿದ್ದಾರೆ. ಇಡೀ ಗ್ರಾಮದ ಜನರು ನನ್ನ ಪರ ಪ್ರಾರ್ಥನೆ ಮಾಡಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಗ್ರಾಮಸ್ಥರು ಮೂರ್ತಿ ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಆದರೆ ಈ ಜಾಗ ಸರ್ಕಾರಿ ಸ್ಥಳವಾಗಿದೆ. ಆದ್ದರಿಂದ ಬೇಡ ಎಂದು ಹೇಳಿ ಯಾವುದೇ ತೊಂದರೆ ಇಲ್ಲದೇ ಜಮೀನು ನೀಡುವ ಭರವಸೆ ನೀಡಿದ್ದೆ ಎಂದರು.

ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಈ ಸ್ಥಳವನ್ನು ಮಂಜೂರು ಮಾಡಿಸಿ ಸ್ವತಃ ಹಣವನ್ನೂ ನೀಡಿ ಅವರಿಗೆ ಹಕ್ಕು ಪತ್ರವನ್ನು ನೀಡಿದ್ದೇನೆ. ಬೆಟ್ಟ 16 ಎಕರೆ ಇದ್ದು, 10 ಎಕರೆ ಜಮೀನು ಮಾತ್ರ ಅವರಿಗೆ ಕಾನೂನಾತ್ಮಕವಾಗಿ ನೀಡಿದ್ದೇನೆ. ಈ ಒಂದು ಸ್ಥಳ ಮಾತ್ರವಲ್ಲ, ನನ್ನದೇ ಸ್ವತಃ ಜಮೀನನ್ನು ಕೂಡ ಕರ್ನಾಟಕ ಸರ್ಕಾರದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ನೀಡಿದ್ದೇನೆ. ಅಲ್ಲದೇ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಲು ನೆರವು ನೀಡಿದ್ದೇವೆ ಎಂದು ತಿಳಿಸಿದರು.

DK SHI RMG copy

ವಿಶ್ವದ ಎತ್ತರದ ಏಕಶಿಲಾ ಪ್ರತಿಮೆ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ 114 ಅಡಿಯ ಏಕಶಿಲಾ ಏಸುಕ್ರಿಸ್ತರ ಪ್ರತಿಮೆ ತಲೆ ಎತ್ತಲಿದೆ. ಪ್ರತಿಮೆಯ ನಿರ್ಮಾಣದ ಶಿಲಾನ್ಯಾಸವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾಡಿದ್ದರು. ಕ್ರಿಸ್ ಮಸ್ ಶುಭ ದಿನದ ಹಿನ್ನೆಲೆಯಲ್ಲಿ ಪ್ರತಿಮೆಗೆ ಸಿದ್ಧವಾಗಿರುವ ಕಲ್ಲಿಗೆ ಉಳಿ ಪೆಟ್ಟು ಹಾಕುವ ಮೂಲಕ ಶಿಲಾನ್ಯಾಸ ನೆರವೇರಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪ್ರತಿಮೆಯ ಮಾದರಿಯನ್ನು ವೀಕ್ಷಿಸಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್ ಕೂಡ ಹಾಜರಿದ್ದರು.

ಏಕಶಿಲೆಯ 114 ಅಡಿ ಎತ್ತರದ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣದ ಕಾರ್ಯ ಈಗಾಗಲೇ ಆರಂಭವಾಗಿದೆ. ಅದರಲ್ಲಿ 13 ಅಡಿ ಮೆಟ್ಟಿಲುಗಳು ಇದ್ದು, ಅದರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಹಾರೋಬೆಲೆ ಗ್ರಾಮದಲ್ಲಿ ಶೇಕಡಾ 99 ರಷ್ಟು ಮಂದಿ ಕ್ರೈಸ್ತ ಸಮುದಾಯದವರಿದ್ದು, ಪ್ರತಿಮೆಯ ಶಿಲಾನ್ಯಾಸದ ಹಿನ್ನೆಲೆಯಲ್ಲಿ ಇಂದು ಬಹುತೇಕ ಗ್ರಾಮಸ್ಥರೆಲ್ಲ ಏಕಶಿಲಾ ಪ್ರತಿಮೆಯ ಮಾದರಿ ಪ್ರತಿಮೆ ವೀಕ್ಷಣೆಗೆ ಆಗಮಿಸಿದ್ದರು. ಅಲ್ಲದೇ ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಕ್ರಿಶ್ಚಿಯನ್ನರು ಕೃತಜ್ಞತೆ ಸಲ್ಲಿಸಿದ್ದರು.

DK SHI RMG a copy

ಬಿಜೆಪಿ ಆರೋಪ: ಇತ್ತ ಏಸು ಪ್ರತಿಮೆ ಸ್ಥಾಪನೆ ಬಗ್ಗೆ ಬಿಜೆಪಿ ಕಟು ಟೀಕೆ ಮಾಡಿದೆ. ಯಾವುದೋ ಆಸೆಗಾಗಿ ತಿಹಾರ್ ಜೈಲಿನಲ್ಲಿದ್ದು ಬಂದಿರೋ ಡಿಕೆಶಿ, ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು ಇಂತಹ ಕೆಲಸ ಮಾಡಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ್‍ಕುಮಾರ್ ಹೆಗ್ಡೆ ಟೀಕಿಸಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಕೆಂಪೇಗೌಡರ ಅನುಯಾಯಿ ಅಂತಾರೆ. ನಿರ್ಮಾಲಾನಂದ ಸ್ವಾಮಿಗಳ ಭಕ್ತ ಅಂತಾರೆ. ಯೇಸು ಪ್ರತಿಮೆ ಮಾಡೋವಾಗ ಕೇಂಪೆಗೌಡರ ನೆನಪು ಯಾಕೆ ಆಗಿಲ್ಲ..? ಸ್ವಾಮೀಜಿಗಳ ನೆನಪು ಯಾಕೆ ಆಗಿಲ್ಲ. ಡಿಕೆ ಶಿವಕುಮಾರ್ ಹಿಂದೂ ಸಮಾಜದ ದೇವರ ಬಗ್ಗೆಯೂ ಚಿಂತಿಸಲಿ ಅಂತ ಮಂಗಳೂರಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *