ತುಮಕೂರು: ಸರ್ಕಾರ ಒಂದು ತಿಂಗಳ ಬ್ಯಾಂಕ್ ಗ್ರಾಹಕರ ಬಡ್ಡಿ ಮನ್ನಾ ಮಾಡಲಿ. ಒಂದು ತಿಂಗಳ ಇಎಂಐಗಳನ್ನ ಮುಂದೂಡಬೇಕೆಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೂ ಕೊರೊನಾ ವೈರಸ್ ಮುನ್ನೆಚ್ಚರಿಕೆಯಾಗಿ ನಿರಂತರ ರಜೆ ಘೋಷಣೆ ಮಾಡಲಾಗಿದೆ. ಇದರಿಂದ ಜನರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 15 ದಿನಗಳ ರಜೆ 1 ತಿಂಗಳು ಆದರೂ ಆಗಬಹುದು. ಹಾಗಾಗಿ ಬ್ಯಾಂಕ್ ಗ್ರಾಹಕರಿಗೆ ಇಎಂಐ ಕಟ್ಟಲು ಕಷ್ಟವಾಗುತ್ತಿದೆ. ಬಡ್ಡಿ ಮನ್ನಾ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಡಿಕೆಶಿ ಮನವಿ ಮಾಡಿದರು.
ಆರೋಗ್ಯ ವಿಚಾರದಲ್ಲಿ ನಾನು ರಾಜಕೀಯ ಮಾಡೋಕೆ ಹೋಗಲ್ಲ. ಈಗ ನಮ್ಮ ಜನಗಳನ್ನ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕೊರೊನಾ ವಿಚಾರದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ ಎಂದರು. ಉನ್ನತ ಮಟ್ಟದ ವೈದ್ಯರ ಸಭೆ ಕರೆದು ಹೊಣೆಗಾರಿಕೆಯನ್ನಾಗಿಸಬೇಕು. ಸೇವಾ ಮನೋಭಾವದಿಂದ ಕೆಲಸ ಮಾಡಲು ಖಾಸಗಿ ಅವರಿಗೂ ಸೂಚಿಸಬೇಕು ಅಂತ ಸಲಹೆ ನೀಡಿದ್ದಾರೆ.
ಇದೇ ವೇಳೆ ಡಿ.ಕೆ.ಶಿವಕುಮಾರ್ ಭೇಟಿಗಾಗಿ ಶ್ರೀಮಠದ ಆವರಣದ ಬಳಿ ನೂರಾರು ಕಾರ್ಯಕರ್ತರು ಜಮಾವಣೆಯಿಂದ ನೂಕುನುಗ್ಗಲು ಉಂಟಾಗಿತ್ತು. ಇದನ್ನ ಸಮರ್ಥಿಸಿಕೊಂಡ ಡಿಕೆಶಿ, ನಾನೇನು ಅವರನ್ನ ಬರಲು ಹೇಳಿಲ್ಲ. ಅಭಿಮಾನದಿಂದ ಬಂದಾಗ ಏನು ಮಾಡೋಕೆ ಆಗಲ್ಲ. ಅವರ ಹುರುಪನ್ನ ಕಡಿಮೆ ಮಾಡಲು ಆಗಲ್ಲ ಎಂದರು.