ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ನಡೆದ ಸಭೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೀಗೆ ಬಂದು ಹಾಗೆ ಹೋಗಿದ್ದರು. ಶಿವಕುಮಾರ್ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೇ ಉಳಿದ ನಾಯಕರುಗಳು ಬಿಸಿ ಬಿಸಿ ಚರ್ಚೆ ನಡೆಸಿದ್ದಾರೆ.
ಹೈಕಮಾಂಡ್ ಡಿ.ಕೆ.ಶಿವಕುಮಾರ್‌ಗೆ ಕೆಪಿಸಿಸಿ ಪಟ್ಟಾಭಿಷೇಕಕ್ಕೆ ತೀರ್ಮಾನಿಸಿರುವುದೇ ರಾಜ್ಯದ ಉಳಿದ ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಳ್ಳುವಂತಾಗಿದೆ. ಸಭೆಯಲ್ಲಿ ಇದರ ಬಗ್ಗೆಯೆ ಸಾಕಷ್ಟು ಚರ್ಚೆ ನಡೆಸಿದ ಕೈ ನಾಯಕರು ಇದರ ಪರಿಣಾಮಗಳ ಬಗ್ಗೆಯೆ ಹೆಚ್ಚು ಮಾತನಾಡಿದ್ದಾರೆ.
ಸಭೆಯಲ್ಲಿ 5 ನಿಮಿಷ ಕುಳಿತು ಎದ್ದು ಹೋದ ಡಿ.ಕೆ.ಶಿವಕುಮಾರ್ ಬಗ್ಗೆಯೇ ನಾಯಕರುಗಳು ಅರ್ಧ ಗಂಟೆ ಕಾಲ ಚರ್ಚೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಹೊಣೆ ಡಿಕೆಶಿ ಹೆಗಲಿಗೆ ಎಂಬ ವಿಷಯ ರಾಜ್ಯ ಕೈ ನಾಯಕರನ್ನು ಬಿಟ್ಟು ಬಿಡದಂತೆ ಕಾಡತೊಡಗಿದೆ.
ಸಭೆಗೆ ತರಾತುರಿಯಲ್ಲಿ ಬಂದು ಹೋದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪಟ್ಟ ನನಗೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ಅಷ್ಟು ಖಚಿತವಾಗಿದೆಯಾ? ಹೈಕಮಾಂಡ್ ಅಷ್ಟು ಖಚಿತ ಭರವಸೆ ಸಿಕ್ಕಿದ್ದು ಹೇಗೆ? ಅಕಸ್ಮಾತ್ ಅವರೆ ಅಧ್ಯಕ್ಷರಾದರೆ ಏನೆಲ್ಲಾ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಸಾಜಷ್ಟು ಗಂಭೀರ ಚರ್ಚೆ ನಡೆದಿದೆ.