Connect with us

Chikkaballapur

ಕಾರ್ಯಕರ್ತರ ಕಿತ್ತಾಟದ ನಡುವೆಯೂ ಕೋಲಾರ ನಾಯಕರ ಮುನಿಸಿಗೆ ತೇಪೆ ಹಚ್ಚಿ ಡಿಕೆಶಿ ಸಂಧಾನ!

Published

on

– ಕೋಲಾರ ಕಾಂಗ್ರೆಸ್ಸಿನಲ್ಲಿ ನಿಲ್ಲದ ಭಿನ್ನಮತ
– ಸಂಸದರ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು
– ಶಿಡ್ಲಘಟ್ಟ ಕಾಂಗ್ರೆಸ್ ಕಚೇರಿಯಲ್ಲಿ ಸಂಧಾನ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕೋಲಾರ ಲೋಕಸಭಾ ಕ್ಷೇತ್ರದ, ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಸಂಸದ ಕೆ.ಎಚ್ ಮುನಿಯಪ್ಪರ ಪಕ್ಷ ವಿರೋಧಿ ಚಟುವಟಿಕೆಗಳಿಂದ ಕೆಂಡಾಮಂಡಲರಾಗಿರುವ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಮುಂದಾಗಿರೋದು ಮಗ್ಗಲು ಮುಳ್ಳಾಗಿದೆ. ವಿರೋಧ ಜಾಸ್ತಿಯಾಗುತ್ತಿರುವುದನ್ನು ಕಂಡ ಕೆ.ಎಚ್ ಮುನಿಯಪ್ಪ ಟ್ರಬಲ್ ಶೂಟರ್ ಡಿಕೆಶಿ ಮುಖಾಂತರ ತೇಪೆ ಹಾಕೋ ಕೆಲಸಕ್ಕೆ ಮುಂದಾಗಿ ಇಂದು ಸಂಧಾನ ಮಾಡಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ವಿರುದ್ಧ ಮುನಿಸಿಕೊಂಡಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪ ನಡುವಿನ ಮುನಿಸು ದೂರ ಮಾಡಲು ಇಂದು ಡಿಕೆ ಶಿವಕುಮಾರ್ ಮುಂದಾಗಿದ್ದರು. ಶಿಡ್ಲಘಟ್ಟ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುನಿಯಪ್ಪದ್ವಯರ ನಡುವೆ ಕಾರ್ಯಕರ್ತರ ಸಮ್ಮುಖದಲ್ಲೇ ಭಿನ್ನಮತ ಶಮನಕ್ಕೆ ಮುಂದಾಗಿದ್ರು. ಆದ್ರೆ ಆರಂಭದಲ್ಲೇ ಕೆ.ಎಚ್ ಮುನಿಯಪ್ಪ ವಿರುದ್ಧ ಧಿಕ್ಕಾರಗಳ ಘೋಷಣೆಗಳು ಮೊಳಗಿದವು.

ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪರ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಬಾರಿ ಕೆ.ಎಚ್ ಮುನಿಯಪ್ಪರಿಗೆ ಬೆಂಬಲಿಸಬಾರದೆಂದು ಕಾರ್ಯಕರ್ತರು ಒತ್ತಾಯಿಸಿದಾಗ ಸಭೆಯಲ್ಲಿ ತಳ್ಳಾಟ ನೂಕಾಟ ನಡೆದು, ಸಚಿವ ಡಿ.ಕೆ.ಶಿವಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ವಿ.ಮುನಿಯಪ್ಪರ ಸಮ್ಮುಖದಲ್ಲೇ ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತು. ಈ ಮಧ್ಯೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವಂತಾಯಿತು.

ಸಂಸದರ ವಿರುದ್ಧ ಕಿಡಿ:
ಸಭೆಯಲ್ಲಿ ಮಾತನಾಡಿದ ಶಾಸಕ ವಿ. ಮುನಿಯಪ್ಪ ಕೆ.ಎಚ್ ಮುನಿಯಪ್ಪನವರಿಗೆ 7 ಚುನಾವಣೆಗಳಲ್ಲೂ ನಾವು ದುಡಿದು ರಾಜಕೀಯ ಸ್ಥಾನ ಮಾನ ನೀಡಿದರೆ ನಮಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಕೆ.ಎಚ್ ಮುನಿಯಪ್ಪನವರೇ ನಿಮ್ಮಿಂದ ನಮಗೇನು ಆಗಬೇಕಿಲ್ಲ. ನಾನು ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೆರವಾದರು. ಅನುಕೂಲ ಪಡೆದ ಪುಣ್ಯಾತ್ಮ ಕೆ.ಎಚ್ ಮುನಿಯಪ್ಪ ನಮ್ಮ ವಿರೋಧಿಗಳ ಜೊತೆ ಸೇರಿ ಸಂಭ್ರಮಿಸಿದರೆಂದು ಕೆಂಡಾಮಂಡಲರಾದರು. ಕೆ.ಎಚ್ ಮುನಿಯಪ್ಪ ಕುತಂತ್ರ ರಾಜಕಾರಣಿ ಎಂದು ಹಿರಿಯರು ಹೇಳಿದ್ದರು ಆದರೂ ನಾನು ನಂಬಲಿಲ್ಲ. ಮಗುವಿಗೆ ತಾಯಿ ಜನ್ಮ ನೀಡಬೇಕಾದರೆ ಎಷ್ಟು ನೋವು ತಿಂತಾರೋ ಅಷ್ಟೇ ನೋವನ್ನು ನಾನು ಈ ಪುಣ್ಯಾತ್ಮನಿಂದ ತಿಂದಿದ್ದೇನೆ ಎಂದು ನೊಂದು ತಮ್ಮ ಆಕ್ರೋಶವನ್ನು ಹಂಚಿಕೊಂಡರು. ಈ ವೇಳೆ ಕಾರ್ಯಕರ್ತರು ಕೂಡ ವಿ.ಮುನಿಯಪ್ಪರ ಮಾತಿಗೆ ಧ್ವನಿಯಾದರು.

ರಾಜಕೀಯ ನಿವೃತ್ತಿ ಸವಾಲ್
ಕೋಲಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮಾತನಾಡಿ ವಿ. ಮುನಿಯಪ್ಪ ಶಾಸಕರಾಗೋ ಮೊದಲೇ ನಾನು ತಾಲೂಕು ಪಂಚಾಯತಿ ಸದಸ್ಯನಾಗಿದ್ದೆ. ಅವರ ಗೆಲುವಿಗೆ ನಾನು ಶ್ರಮಿಸಿದ್ದೇನೆ. ನಾನು ಮುನಿಯಪ್ಪರ ವಿರುದ್ಧ ಕೆಲಸ ಮಾಡಿಲ್ಲ. ಅವರಿಗೆ ಮತ ಹಾಕಬೇಡಿ ಅಂತ ನಾನೇಳಿರೋದು ಸಾಬೀತಾದರೆ ರಾಜಕೀಯ ನಿವೃತ್ತಿಯಾಗೋದಾಗಿ ಸವಾಲ್ ಹಾಕಿದರು. ಒಕ್ಕಲಿಗ ನಾಯಕರಲ್ಲಿ ವಿ.ಮುನಿಯಪ್ಪ ಕೂಡ ಹಿರಿಯರು ಅವರಿಗೆ ಸಚಿವ ಸ್ಥಾನ ನೀಡುವಂತೆ ನಾನು ಒತ್ತಾಯಿಸಿದ್ದೆ. ನಾನು ಅವರ ಋಣದಲ್ಲಿ ಇದ್ದೇನೆ. ಅವರಿಗೆ ದ್ರೋಹ ಮಾಡೋ ವ್ಯಕ್ತಿ ನಾನಲ್ಲ. ಸುಬ್ರಮಣಿ ಅಂತ ನಾಲ್ಕು ಜನ ಬೆಂಕಿ ಹಾಕೋವರಿಂದ ನಮ್ಮಿಬ್ಬರ ಮಧ್ಯೆ ವೈಮನಸ್ಸು ಮೂಡುವಂತಾಗಿದೆ ಎಂದಾಗ ವೇದಿಕೆಯಲ್ಲಿದ್ದ ಸುಬ್ರಮಣಿ ಕೆ.ಎಚ್ ಮುನಿಯಪ್ಪ ವಿರುದ್ಧ ಎದ್ದು ನಿಂತು ಕೆಂಡಾಮಂಡಲರಾದರು. ಆದರೂ ಕೆ.ಎಚ್ ಮುನಿಯಪ್ಪ ಎಲ್ಲರನ್ನೂ ಸಮಾಧಾನ ಪಡಿಸಿ ಓಲೈಕೆ ಮಾಡಿದ್ದು ವಿಶೇಷವಾಗಿತ್ತು.

ಡಿಕೆಶಿ ಸಂಧಾನ ಸಫಲ:
ಸಂಧಾನಕ್ಕೆ ಬಂದಿದ್ದ ಸಚಿವ ಡಿ.ಕೆ.ಶಿವಕುಮಾರ್ ನಾನು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ವರಿಷ್ಠರ ನಿರ್ಧಾರದಿಂದ ಹೊಂದಾಣಿಕೆ ಮಾಡಿಕೊಂಡು ಹೋಗ್ತಿದ್ದೇನೆ. ಇಂತಹದರಲ್ಲಿ ಮುನಿಯಪ್ಪಧ್ವಯರ ಮಧ್ಯೆ ಇರೋ ಮುನಿಸು ಮರೆತು ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು. ಅಲ್ಲದೇ ಚುನಾವಣೆ ಮುಗಿದ ಬಳಿಕ ನಾನು ಕೆ.ಎಚ್ ಮುನಿಯಪ್ಪ ಸೇರಿ ವಿ. ಮುನಿಯಪ್ಪರಿಗೆ ಮಂತ್ರಿ ಮಾಡೋ ಭರವಸೆ ನೀಡೋ ಮೂಲಕ ತೇಪೆ ಹಾಕುವ ಕೆಲಸ ಮಾಡಿದರು.

Click to comment

Leave a Reply

Your email address will not be published. Required fields are marked *

www.publictv.in