ಬೆಂಗಳೂರು: ಫೆಬ್ರವರಿಯಲ್ಲಿ ಉಪಚುನಾವಣೆ ನಡೆಯುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಿ, ರಾಜ್ಯದಲ್ಲಿನ ಪ್ರಮುಖ ನಾಯಕರನ್ನು ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನಿಸಿದೆ. ಅಧ್ಯಕ್ಷರ ಪಟ್ಟಿಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರು ಪ್ರಮುಖವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ನಿನ್ನೆ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ಡಿಕೆಶಿ ಹಾಗೂ ಸೋನಿಯಾ ಗಾಂಧಿ ಅವರ ಮಧ್ಯೆ ವಿಸ್ತೃತ ಸಂಭಾಷಣೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಡಿಕೆಶಿಗೆ ಸೋನಿಯಾ ಗಾಂಧಿ ತಿಳಿಸಿದ್ದು, ಇದಕ್ಕೆ ಡಿಕೆಶಿ ಸಹ ಕೆಲ ಷರತ್ತುಗಳನ್ನು ವಿಧಿಸಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಮುಂದಿನ ವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ಸಭೆಯಲ್ಲಿ ಬಹುತೇಕ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶುಕ್ರವಾರ ನಡೆದ ಫೋನ್ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಬೇಕಾದಲ್ಲಿ ನನ್ನ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಸೋನಿಯಾ ಗಾಂಧಿ ಅವರಿಗೆ ವಿವರವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
Advertisement
ಐದು ಷರತ್ತುಗಳು:
ಡಿಕೆ ಶಿವಕುಮಾರ್ ಒಟ್ಟು 5 ಷರತ್ತುಗಳನ್ನು ವಿಧಿಸಿದ್ದು, ಅಧ್ಯಕ್ಷನಾಗಿ ನನಗೆ ಸರ್ವ ಸ್ವಾತಂತ್ರ್ಯ ಬೇಕು. ಯಾವುದೇ ಅಡೆತಡೆಗಳು ಇರಬಾರದು. ನನ್ನ ನಿರ್ಧಾರದ ಪ್ರಕಾರವೇ ಎಲ್ಲ ನಡೆಯಬೇಕು ಎಂಬುದು ಮೊದಲ ಷರತ್ತಾಗಿದೆ. ಕೆಪಿಸಿಸಿ ಹುದ್ದೆಗಳಿಗೆ ಸದ್ಯರನ್ನು ನೇಮಿಸಲು ನನಗೆ ಸ್ವಾತಂತ್ರ್ಯ ಇರಬೇಕು, ಯಾರೂ ಕೂಡ ಹಸ್ತಕ್ಷೇಪ ಮಾಡಬಾರದು. ಟಿಕೆಟ್ ಹಂಚಿಕೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ನಾನೇ ಸಿಎಂ ಆಗಬೇಕು ಎಂದು ಐದು ಷರತ್ತು ವಿಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
ಈ ಕುರಿತು ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಪ್ರತಿಕ್ರಿಯಿಸಿ, ನಾನು ಯಾವುದೇ ಸ್ಥಾನಕ್ಕೂ ಅರ್ಜಿ ಹಾಕಿಕೊಂಡು ಓಡಾಡುವುದಿಲ್ಲ. ಸುಮ್ಮನೆ ಟಿವಿಯಲ್ಲಿ ನನ್ನ ಹೆಸರು ಹಾಕುತ್ತೀರಿ. ಹೀಗೆ ಹಾಕಿ ನನಗೆ ಯಾವ ಹುದ್ದೆಯೂ ಸಿಗದಂತೆ ಮಾಡುತ್ತೀರಿ ಎಂದು ಹೇಳಿ ನಕ್ಕಿದ್ದರು.
ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಭೇಟಿ ಮಾಡುತ್ತಿದ್ದು, ಎರಡು ದಿನದಿಂದ ರಾಷ್ಟ್ರ ರಾಜಧಾನಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಮಧ್ಯಾಹ್ನ 12ಕ್ಕೆ ಸೋನಿಯಾ ಗಾಂಧಿ ಭೇಟಿ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ದು, ಎಚ್‍ಡಿಡಿ ದೊಡ್ಡವರು:
ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರು, ದೇವೇಗೌಡರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಅವರಿಬ್ಬರು ದೊಡ್ಡವರು. ಅವರ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಕಾಂಗ್ರೆಸ್ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಹೀಗಾಗಿ ಈ ಕುರಿತು ನಾವಿನ್ನು ತೀರ್ಮಾನ ಮಾಡುವ ಹಂತಕ್ಕೆ ಬಂದಿಲ್ಲ. ವಿಶ್ವಾಸ, ಗೌರವ ಬಿಟ್ಟು ಬದಲಾವಣೆ ಮಾಡಿಕೊಳ್ಳಲು ತಯಾರಿಲ್ಲ. ಒಟ್ಟಿಗೆ ಒಂದೇ ಸರ್ಕಾರದಲ್ಲಿ ಕೆಲಸ ಮಾಡಿದ್ದೇವೆ. ಫಲ ಸಿಗಲಿ, ಬಿಡಲಿ ಸರ್ಕಾರದಲ್ಲಿ ಒಗ್ಗಟ್ಟಾಗಿ ಇದ್ದೆವು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.