– ಡಿಕೆಶಿ ಸುದ್ದಿಗೋಷ್ಠಿ ಬೆನ್ನಲ್ಲೇ ಸರ್ಕಾರದಿಂದ ಸ್ಪಷ್ಟನೆ
ನವದೆಹಲಿ: ಕೆಂಪೇಗೌಡ ಅಧ್ಯಯನ ಕೇಂದ್ರದ ಕಾಮಗಾರಿಯನ್ನು ಸ್ಥಗಿತಗೊಳಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಕ್ಕಲಿಗರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರದ ಬಳುವಳಿ ಗೊತ್ತಾಗಿದೆ. ಬೆಂಗಳೂರು ವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಪೀಠ ಕಾಮಗಾರಿಗೆ ಶ್ರೀ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಎಲ್ಲರೂ ಸೇರಿ ಅಡಿಗಲ್ಲು ಹಾಕಿದ್ದೆವು. ಆದರೆ ಯಡಿಯೂರಪ್ಪ ಸರ್ಕಾರ ಈಗ ಆ ಕಾಮಗಾರಿಯನ್ನು ಕೈ ಬಿಟ್ಟಿದೆ. 50 ಕೋಟಿ ರೂ. ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಬಿಬಿಎಂಪಿ ಆಯುಕ್ತರ ಶಿಫಾರಸನ್ನೇ ನೆಪ ಮಾಡಿಕೊಂಡು ರದ್ದುಗೊಳಿಸಿದ್ದಾರೆ. ಇದಕ್ಕೆ ಯಡಿಯೂರಪ್ಪನವರು ನೇರ ಕಾರಣ ಎಂದು ಹರಿಹಾಯ್ದರು.
ಇಡೀ ವಿಶ್ವವೇ ಬೆಂಗಳೂರನ್ನು ನೋಡುತ್ತಿದೆ. ಇದನ್ನು ಕಟ್ಟಿದವರು ಕೆಂಪೇಗೌಡ. ಆದರೆ ಅವರ ಅಧ್ಯಯನ ಕೇಂದ್ರದ ಸ್ಥಾಪನೆಗೆ ತಡೆ ನೀಡಿದ್ದಾರೆ. ಇದೇ ಯಡಿಯೂರಪ್ಪ ಸರ್ಕಾರದ ಸಾಧನೆ. ಕಾಮಗಾರಿಗೆ ತಡೆ ನೀಡಿರುವ ಕುರಿತು ನನಗೆ ಮೆಸೇಜ್ ಬಂತು. ಈ ಕುರಿತು ಮುಂದೆ ದೊಡ್ಡ ಹೋರಾಟ ಮಾಡುತ್ತೇವೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ ಎಂದರು.
ಈ ಕುರಿತು ಎಲ್ಲ ಶಾಸಕರಿಗೂ ಪತ್ರ ಬರೆದಿದ್ದೇನೆ. ಹಿಂದಿನ ಸರ್ಕಾರದ ಮಂಜೂರಾತಿಯನ್ನು ಕೈಬಿಟ್ಟಿರುವ ಮಾಹಿತಿ ಕೇಳಿದ್ದೇನೆ. ಇದರ ಬಗ್ಗೆ ಹೋರಾಟ ಮಾಡಲೇಬೇಕು. ಈ ಕಾಮಗಾರಿ ನಿಲ್ಲಿಸುವ ಮೂಲಕ ಕೆಂಪೇಗೌಡರ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ. ಕೆಂಪೇಗೌಡರು ಒಂದು ಜಾತಿಗೆ ಸೇರಿದವರಲ್ಲ, ಇದು ಬೆಂಗಳೂರಿನ ನಾಗರಿಕರಿಗೆ ಮಾಡಿದ ಅವಮಾನ. ಒಕ್ಕಲಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದನ್ನು ಮಾಧ್ಯಮದವರೇ ನಿರ್ಧರಿಸಬೇಕು ಎಂದರು.
ಅಂಬೇಡ್ಕರ್, ಬಸವಣ್ಣ ಅಧ್ಯಯನ ಪೀಠದಂತೆ ಕೆಂಪೇಗೌಡ ಅಧ್ಯಯನ ಪೀಠ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ 50 ಕೋಟಿ ರೂ. ಬಜೆಟ್ ಕೂಡ ನೀಡಲಾಗಿತ್ತು. ಆದರೆ ಈ ಸರ್ಕಾರ ತಡೆ ಹಿಡಿದಿದೆ. ಈ ಕಾಮಗಾರಿ ಸ್ಥಗಿತಗೊಳಿಸಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳ ಯಾವುದಾದರೂ ಕೆಲಸಕ್ಕೆ ತಡೆಯೊಡ್ಡಿದರಾ? ಈ ಕುರಿತು ಚರ್ಚಿಸಿ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ಖರ್ಗೆ ಸಿಎಂ ಆಗುವ ಕುರಿತು ಪ್ರತಿಕ್ರಿಯಿಸಿದ ಅವರು, ಖರ್ಗೆ ಅವರನ್ನು ಸಿಎಂ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲರೂ ಪಕ್ಷ ವಹಿಸಿದ ಕೆಲಸ ಮಾಡಿದ್ದೇವೆ. 15 ಕ್ಷೇತ್ರದಲ್ಲೂ ಜನ ತೋರಿದ ಪ್ರೀತಿ ಮತವಾಗಿ ಪರಿವರ್ತನೆ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಜಾಮೀನು ಸಿಕ್ಕಿರುವುದು ಬಹಳ ಸಂತೋಷವಾಗಿದೆ. ಕಡೆಗೂ ನ್ಯಾಯಾಲಯ ಜಾಮೀನು ನೀಡಿದೆ, ನ್ಯಾಯ ಒದಗಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಚಿದಂಬರಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಾಜ್ಯ ಸರ್ಕಾರ ಸ್ಪಷ್ಟನೆ
ಮಾಜಿ ಸಚಿವ ಡಿಕೆಶಿ ಸುದ್ದಿಗೋಷ್ಠಿ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ. ಬೆಂಗಳೂರು ವಿಶ್ವ ವಿದ್ಯಾಲಯ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ ಕುರಿತು 2018-19ರ ಸಾಲಿನಲ್ಲಿ ಕೇವಲ 10 ಲಕ್ಷ ರೂ. ಮಾತ್ರ ಅನುದಾನ ಮೀಸಲಿಡಲಾಗಿತ್ತು. ಅನುದಾನದ ಕೊರತೆಯಿಂದಾಗಿ ಹಾಗೂ ನೆರೆ ಹಾವಳಿಯಿಂದ ತಾತ್ಕಾಲಿಕವಾಗಿ ಯೋಜನೆಯನ್ನು ಮುಂದೂಡಲು ಪ್ರಸ್ತಾಪಿಸಲಾಗಿತ್ತು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಆದರೆ ಈ ಯೋಜನೆಯ ವರದಿ ಈಗಾಗಲೇ ಸಿದ್ದಪಡಿಸಿದ್ದು, ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ ಮತ್ತು ಸಂಶೋಧನ ಕೇಂದ್ರ ಅವಶ್ಯಕತೆಯಿರುವ ಹಿನ್ನಲೆಯಲ್ಲಿ ಮುಂದಿನ ಆಯ್ಯವ್ಯಯದಲ್ಲಿ 50 ಕೋಟಿ ರೂ.ಗಳ ಅನುದಾನ ಮೀಸಲಿಡುವ ನಿರೀಕ್ಷೆ ಹೊಂದಿದೆ. ಹೀಗಾಗಿ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಕೋರಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಯಾವುದೇ ಕಾರಣಕ್ಕೂ ಯೋಜನೆ ಕೈ ಬಿಟ್ಟಿಲ್ಲ ಇದರ ಬಗ್ಗೆ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ವಿವರಿಸಿದೆ.