– ಮೈಸೂರು ಅಳಿಯ ಎಂಬುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ
– ಜೈಲಿನಲ್ಲಿ ಒಂದು ದಿನವೂ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ
ಮೈಸೂರು: ನಾನು ತಪ್ಪು ಮಾಡಿದ್ದರೆ ನೇಣು ಹಾಕಲಿ. ಬೆಳಕು ಇರುವವರೆಗೆ ಮಾತ್ರ ನೆರಳು ನಮ್ಮ ಜೊತೆ ಇರುತ್ತದೆ, ಕತ್ತಲೆಯಾದ ಮೇಲೆ ನೆರಳೂ ನಮ್ಮ ಜೊತೆ ಇರುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸೂರ್ಯ ಮೇಲಿರುವವನು ಕೆಳಗಿಳಿಯಲೇ ಬೇಕು. ಹಗಲು-ರಾತ್ರಿ ಸಹಜ. ಕಾಲ ಉರುಳುತ್ತದೆ ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.
Advertisement
Advertisement
ಚಾಮುಂಡಿ ತಾಯಿ ದುಃಖ ದೂರ ಮಾಡುವವಳು. ನಾನು ಮೈಸೂರಿನ ಅಳಿಯ, ಮೈಸೂರಿನ ಮೇಲೆ ಎಲ್ಲ ಥರದ ಹಕ್ಕು ನನಗಿದೆ. ಕೌಟುಂಬಿಕವಾಗಿ, ರಾಜಕೀಯವಾಗಿಯೂ ನನಗೆ ಹಕ್ಕಿದೆ. ಆದರೆ ಬಹಳಷ್ಟು ಕಾರ್ಯಕ್ರಮಗಳಿಗೆ ನಾನು ಬಂದಿಲ್ಲ. ನೀವು ಕರೆದರೆ ಮಾತ್ರ ಬರುತ್ತೇನೆ. ನಾನು ಮೈಸೂರಿನ ಅಳಿಯ ಎಂಬುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನಿಂದ ನನಗೆ ಹೆಣ್ಣು ಕೊಟ್ಟ ಕುಟುಂಬಕ್ಕೂ ಕಿರುಕುಳ ಉಂಟಾಯಿತು ಎಂದು ಗುಡುಗಿದರು.
Advertisement
ಬೇರು ಮರೆತರೆ ಹಣ್ಣು ಇಲ್ಲ ಎಂಬುದನ್ನು ನಂಬಿದ್ದೇನೆ. ಪಕ್ಷದ ಮುಖಂಡರಿಗಿಂತ ಕಾರ್ಯಕರ್ತರು ಮುಖ್ಯ. ಪಕ್ಷ, ಜಾತಿ, ಧರ್ಮ ಮರೆತು ನನ್ನ ಪರವಾಗಿ ಹೋರಾಟ ಮಾಡಿದ್ದೀರಿ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಎಲ್ಲ ಪಕ್ಷದವರು ಪ್ರಾರ್ಥನೆ ಮಾಡಿದರು. ಈ ಪ್ರಾರ್ಥನೆ ಫಲವಾಗಿ 50 ದಿನದಲ್ಲಿ ನಾನು ಜೈಲಿನಿಂದ ಮರಳಿ ಬಂದೆ. ನಿಮ್ಮ ಪ್ರೀತಿ ಮುಂದೆ ನನ್ನ ಆಸ್ತಿ ಗೌಣ. ನೀವು ತೋರಿಸಿದ ಪ್ರೀತಿಯಿಂದ ನನ್ನ ಸಾಲದ ಅಭಿಮಾನ ನನ್ನ ಪಾಲಿಗೆ ಹೆಚ್ಚಾಗಿದೆ ಎಂದು ಹೇಳಿ ಭಾವುಕರಾದರು.
Advertisement
ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಮೈಸೂರು ಕಾರ್ಯಕರ್ತರಿಗೆ 3 ಸಾವಿರ ಸೈಟ್ ಕೊಡಲು ಮುಂದಾಗಿದ್ದೆ. ಆಗ ಸಚಿವರಾಗಿದ್ದ ನನ್ನ ಸ್ನೇಹಿತ ವಿಶ್ವನಾಥ್ ನಾನೇನೋ ಅಪರಾಧ ಮಾಡುತ್ತಿದ್ದೇನೆ ಎಂದು ಅದನ್ನು ತಡೆದರು ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ರಾಜಕೀಯ ಮುಗಿಯಿತು, ಜೀವನ ಪೂರ್ತಿ ಹೊರಗಡೆ ಬರುವುದಿಲ್ಲ. 7 ವರ್ಷ ಜೈಲು ಎಂದು ಎಲ್ಲರೂ ಅಂದು ಕೊಂಡಿದ್ದರು. ಮಾಧ್ಯಮಗಳೂ ಅದೇ ರೀತಿ ತೋರಿಸಿದವು. ಸಮಯ ಮತ್ತು ಕಾನೂನು ಎರಡು ಉತ್ತರ ಕೊಡುತ್ತವೆ. ಹಗಲು-ರಾತ್ರಿ ಸಹಜ, ನೆರಳು ನಾವು ಬೆಳಕಲ್ಲಿ ಇದ್ದಾಗ ಮಾತ್ರ ಇರುತ್ತದೆ. ನಾವು ಕತ್ತಲಲ್ಲಿ ಇದ್ದಾಗ ಅದೂ ಸಹ ಇರುವುದಿಲ್ಲ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಲಿ. ಅಧಿಕಾರಿಗಳು ಅರ್ಥ ಮಾಡಿಕೊಳ್ಳಲಿ ಎಂದು ಹರಿಹಾಯ್ದರು.
ಜೈಲಲ್ಲಿ ಚಿದಂಬರಂ ಅವರನ್ನು ಹೇಗೆ ನೋಡಿಕೊಳ್ಳುತ್ತಿದ್ದರು. ನನ್ನನ್ನು ಹೇಗೆ ನೋಡಿ ಕೊಳ್ಳುತ್ತಿದ್ದರು ಎನ್ನುವುದನ್ನು ಮುಂದೆ ಹೇಳುತ್ತೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದಿನವೂ ನನ್ನ ತಮ್ಮನಿಗೆ ಫೋನ್ ಮಾಡುತ್ತಿದ್ದರು ಎಂದು ಇದೇ ವೇಳೆ ಸೋನಿಯಾ ಹಾಗೂ ರಾಹುಲ್ ಪರ ಬ್ಯಾಟ್ ಮಾಡಿದರು.
ಜೈಲಿನಲ್ಲಿ ನಾನು ಒಂದು ದಿನವೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ಆದರೆ, ನನ್ನ ಮಕ್ಕಳು ಅವರ ಸ್ಕೂಲಲ್ಲಿ ನಿಮ್ಮಪ್ಪ ಜೈಲಿಗೆ ಹೋದವನು ಎಂದು ಕೇಳಿದರೆ ಏನು ಹೇಳುತ್ತಾರೆ ಎಂದು ನೆನೆದು ನೊಂದು ಕುಳಿತಿದ್ದೆ. ನಾನು ತಪ್ಪು ಮಾಡಿದ್ದರೆ ನೇಣು ಹಾಕಲಿ, ನಾನು ಪ್ರಮಾಣಿಕವಾಗಿ ವ್ಯವಹಾರ ಮಾಡಿದ್ದೇನೆ ಒತ್ತಿ ಹೇಳಿದರು.
ರಸ್ತೆಯಲ್ಲಿ ಮೈಸೂರಿಗೆ ಬಂದಿದ್ದರೆ ಇಷ್ಟೊತ್ತಿಗೆ ತಲುಪಲು ಆಗುತ್ತಿರಲಿಲ್ಲ. ಹೀಗಾಗಿ ರೈಲಿನಲ್ಲಿ ಬಂದೆ. ಮಂಡ್ಯ, ಮೈಸೂರಿನ ಹಲವು ನಾಯಕರು ಕರೆ ಮಾಡಿದ್ದರು. ಅಲ್ಲದೆ ಸುತ್ತೂರು ಶ್ರೀಗಳು ಇಂದು ಫೋನ್ ಮಾಡಿ ಮಠದಲ್ಲಿ ಇರುವುದಿಲ್ಲ ಎಂದು ಹೇಳಿದ್ದರು. ಜೆಡಿಎಸ್ಸಿನ ಆರು ಶಾಸಕರು ಬಂದು ಭೇಟಿ ಮಾಡಬೇಕೆಂದು ಕಾಯುತ್ತಿದ್ದರು. ಇದೆಲ್ಲ ನನ್ನ ಪುಣ್ಯ ಎಂದು ಭಾವುಕರಾದರು.
ಬಿಎಸ್‍ವೈ ನನ್ನನ್ನೇ ಬಿಡಲಿಲ್ಲ, ನನ್ನ ಕ್ಷೇತ್ರಕ್ಕೆ ಇದ್ದ ವೈದ್ಯಕೀಯ ಕಾಲೇಜನ್ನು ಕಿತ್ತುಕೊಂಡರು. ಇನ್ನೂ ಬೇರೆ ಶಾಸಕರದ್ದು ಬಿಡುತ್ತಾರಾ, ನನಗೆ ಚಕ್ರ ತಿರುಗಿಸುವುದು ಗೊತ್ತಿದೆ. ಎಲ್ಲಾ ಸರಿ ಹೋಗುತ್ತದೆ. ಅಧಿಕಾರ ಶಾಶ್ವತ ಅಲ್ಲ. ನಮ್ಮ ಮನೆಯದೂ ಸ್ವಲ್ಪ ಸರಿ ಪಡಿಸಿಕೊಳ್ಳೋಣ. ನಂತರ ಚಕ್ರ ತಿರುಗಿಸುವುದು ನನಗೆ ಗೊತ್ತಿದೆ.
ಡಿಕೆಶಿ ಸಿಎಂ ಆಗಬೇಕು
ಇದೇ ವೇಳೆ ಮಾಜಿ ಸಚಿವ ತನ್ವೀರ್ ಸೇಠ್ ಮಾತನಾಡಿ, ಡಿಕೆಶಿ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಸಾಕಷ್ಟು ತಪ್ಪುಗಳಾಗಿರುವುದು ಸಹಜ, ಆದರೆ ಅವರೊಂದಿಗೆ ನಾವು ಇರುತ್ತೇವೆ. ನಮ್ಮ ಪಕ್ಷ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದೆ. ಡಿಕೆಶಿ ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದಾರೆ. ಆದರೆ ಅವರಿಗೇ ಹೆಚ್ಚು ಕಷ್ಟಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿಯಾಗಬೇಕು ಇದಕ್ಕೆ ನನ್ನ ಬೆಂಬಲವಿದೆ ಎಂದರು.