ಟ್ರಬಲ್ ಶೂಟರ್ ಬಂಧನ- ಯಾರು ಏನು ಹೇಳಿದ್ರು?

Public TV
3 Min Read
DK Shivakumar ED Main 3

ಬೆಂಗಳೂರು: ಮಾಜಿ ಸಚಿವ, ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಅವರ ಬಂಧನವಾಗುತ್ತಿದ್ದಂತೆ ಕರ್ನಾಟಕದ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ. ಡಿ.ಕೆ.ಶಿವಕುಮಾರ್ ಬೆಂಬಲಿಗರು ಮತ್ತು ಕಾಂಗ್ರೆಸ್ ನಾಯಕರು, ಇದೊಂದು ಬಿಜೆಪಿ ಷಡ್ಯಂತ್ರ, ಬಿಜೆಪಿ ಸರ್ಕಾರಿ ಸಂಸ್ಥೆಗಳನ್ನು ತಮ್ಮ ಅನಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಇತ್ತ ಬಿಜೆಪಿ ನಾಯಕರು, ಕಾನೂನಿನ ಮುಂದೆ ಎಲ್ಲರೂ ಒಂದೇ, ಎಲ್ಲವೂ ಕಾನೂನಿ ಪ್ರಕಾರ ನಡೆಯಲಿದೆ ಎಂದು ಹೇಳುತ್ತಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ:
ಡಿಕೆ ಶಿವಕುಮಾರ್ ಬಂಧನ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ. ಹಬ್ಬಕ್ಕೂ ರಿಲೀಫ್ ಕೊಡದೇ ಸತತ ವಿಚಾರಣೆ ನಡೆಸಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪ ಹೇಳಿ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ 4 ದಿನಗಳಿಂದ ಸತತ ವಿಚಾರಣೆಗೆ ಡಿಕೆಶಿ ಹಾಜರಾಗಿದ್ದರೂ ಕಸ್ಟಡಿಗೆ ಪಡೆದಿರುವುದು ರಾಜಕೀಯ ಷಡ್ಯಂತ್ರ. ಬಿಜೆಪಿ ಸರ್ಕಾರ ವಿಪಕ್ಷಗಳೇ ಇರಬಾರದು ಎಂದು ಹೀಗೆ ಮಾಡುತ್ತಿದೆ. ಇಡಿ ಬಂಧನ ಬಗ್ಗೆ ಕಳೆದ 7-8 ತಿಂಗಳ ಹಿಂದೆಯೇ ಅಂದಾಜು ಮಾಡಿದ್ದೇ, ಡಿಕೆಶಿ ಒಂದು ವರ್ಷದಿಂದ ತನಿಖೆಗೆ ಸಹಕರಿಸುತ್ತಿದ್ದಾರೆ. ಅವರನ್ನು ಬಂಧನ ಮಾಡುವ ಅವಶ್ಯಕತೆ ಏನಿತ್ತು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಆಗಿದೆ. ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿದ್ದಕ್ಕೆ ಟಾರ್ಗೆಟ್ ಮಾಡಿದ್ದಾರೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೇಂದ್ರದ ವಿರುದ್ಧ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ನೀಡುತ್ತದೆ. ಸಿಎಂ ಯಡಿಯೂರಪ್ಪ ಸೇರಿ ಡಿಸಿಎಂ ಗೋವಿಂದ ಕಾರಜೋಳ, ಅಶ್ವತ್ ನಾರಾಯಣ ವಿರುದ್ಧ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

ರಾಮಲಿಂಗಾರೆಡ್ಡಿ:
ಡಿಕೆಶಿ ಬಂಧನಕ್ಕೆ ಶಾಸಕ ರಾಮಲಿಂಗಾರೆಡ್ಡಿ ಕೆಂಡಕಾರಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ವಿಪಕ್ಷಗಳನ್ನು ತುಳಿಯುವ ಕೆಲಸ ಮಾಡ್ತಿದೆ. ಚಿದಂಬರಂ, ಡಿಕೆಶಿ ಮಾತ್ರ ಅಲ್ಲ ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಡಿ, ಐಟಿ ಅಂತಹ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ತಿದೆ ಎಂದು ವಾಗ್ದಾಳಿ ನಡೆಸಿದರು. ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ರಾಮಲಿಂಗಾರೆಡ್ಡಿ ಭೇಟಿ ನೀಡಿದರು.

ನಾನು ಡಿಕೆಶಿ ಭೇಟಿಗಾಗಿಯೇ ಆಸ್ಪತ್ರೆಗೆ ಹೋಗಿದ್ದೆ. ಭೇಟಿ ವೇಳೆ ಡಿಕೆಶಿ ಕೊನೆಗೂ ಸಾಧಿಸಿಬಿಟ್ಟರಪ್ಪ. ನಾನು ಕೋರ್ಟ್ ನಲ್ಲಿ ಹೋರಾಟ ಮಾಡ್ತೀನಿ ಎಂದ್ರು. ಡಿಕೆಶಿ ಆರೋಗ್ಯ ತಪಾಸಣೆಗಾಗಿ ವೈದ್ಯರು ರಕ್ತ ಪಡೆಯುತ್ತಿದ್ದರು ವರದಿ ಬಂದ ಬಳಿಕ ಅವರ ಆರೋಗ್ಯದ ಬಗ್ಗೆ ಗೊತ್ತಾಗಲಿದೆ. ಪಬ್ಲಿಕ್ ಟಿವಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ:
ಡಿಕೆ ಶಿವಕುಮಾರ್ ಬಂಧನ ಅತ್ಯಂತ ಖಂಡನೀಯ ಕೃತ್ಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿ ಮುಗಿಸಲು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಿವಕುಮಾರ್ ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನೇಶ್ ಗುಂಡೂರಾವ್:
ದ್ವೇಷದ, ಕುತಂತ್ರದ ರಾಜಕಾರಣ ಮಾಡುತ್ತಿರುವ ನರೇಂದ್ರ ಮೋದಿ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಮುಗಿಸುವ ಹೀನ ಕೃತ್ಯಕ್ಕಿಳಿದಿದೆ. ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಕಟುವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷ, ಕಾರ್ಯಕರ್ತರ ಸೈದ್ಧಾಂತಿಕ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಕೆಪಿಸಿ ಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ರಂದೀಪ್ ಸುರ್ಜೇವಾಲಾ:
ದೇಶದ ಅರ್ಥ ವ್ಯವಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ. ಕೇಂದ್ರ ಸರ್ಕಾರದ ನಿರ್ಧಾರಗಳಿಂದ ಎಲ್ಲ ಉದ್ಯಮಗಳು ಅವನತಿಯತ್ತ ಸಾಗುತ್ತುದೆ. ದೇಶದ ಜಿಡಿಪಿ ದರವು ಗಣನೀಯವಾಗಿ ಕುಸಿಯುತ್ತಿದ್ದು, ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿ ನಮ್ಮ ನಾಯಕರನ್ನು ಬಂಧಿಸುತ್ತಿದೆ. ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಮುಗ್ಧರಾಗಿದ್ದು, ಇಡಿ ಅಧಿಕಾರಿಗಳಿಗೆ ಅವರನ್ನು ಬಂಧಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಇದೊಂದು ರಾಜಕೀಯ ಪ್ರೇರಿತ ಬಂಧನ ಎಂದು ಕಾಂಗ್ರೆಸ್ ನಾಯಕ ರಂದೀಪ್ ಸುಜೇವಾಲಾ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *