ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧನ ಮಾಡಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಿಂದ ಕೆಎಸ್‌ಆರ್‌ಟಿಸಿ ಭಾರೀ ನಷ್ಟ ಎದುರಿಸಿದೆ. ಪ್ರತಿಭಟನೆ ವೇಳೆ ರಾಜ್ಯದ ವಿವಿಧೆಡೆ ಒಟ್ಟು 18 ಬಸ್ಸುಗಳಿಗೆ ಹಾನಿಯಾಗಿದ್ದು, 13 ಲಕ್ಷದ 67 ಸಾವಿರ ರೂ. ನಷ್ಟ ಸಂಭವಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿಯಿಂದ ಡಿಕೆ ಶಿವಕುಮಾರ್ ಅವರ ಬಂಧನ ವಿರೋಧಿಸಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಿಡಿಗೇಡಿಗಳು 2 ಬಸ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ 16 ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಮಾಹಿತಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ತಲುಪಿದೆ.
ಕನಕಪುರ ನಗರವೊಂದರಲ್ಲೇ 10 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಉಪ್ಪಿನಂಗಡಿ ಬಳಿ ವೋಲ್ವೋ ಬಸ್ಸಿಗೆ ಹಾನಿಯಾಗಿದೆ. ಉಳಿದಂತೆ ಬೆಂಗಳೂರಿನ ನವರಂಗ, ಮೌರ್ಯ ಸರ್ಕಲ್, ತವರೇಕೆರೆಯ ಚಿಕ್ಕನಹಳ್ಳಿ ಗೇಟ್ ಹಾಗೂ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಬಸ್ಸುಗಳಿಗೆ ಕಲ್ಲು ತೂರಲಾಗಿದೆ. ಕನಕಪುರ ನಗರದಲ್ಲಿ ಎರಡು ಬಸ್ಸಿಗೆ ಬೆಂಕಿ ಹಚ್ಚಲಾಗಿದ್ದು, ಇದರಲ್ಲಿ ಒಂದು ಬಸ್ಸು ಸಂಪೂರ್ಣ ಸುಟ್ಟು ಹೋಗಿದ್ದೆ. ಮತ್ತೊಂದು ಬಸ್ಸಿಗೆ ಭಾಗಶಃ ಹಾನಿಯಾಗಿದೆ.