ಬೆಂಗಳೂರು: ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಧರ್ಮರಾಯನ ಧರ್ಮತ್ವ ಇರಬೇಕು. ದಾನಶೂರ ಕರ್ಣನಲ್ಲಿ ದಾನತ್ವ ಇರುಬೇಕು. ಅರ್ಜುನನ ಗುರಿ ಇರಬೇಕು. ಭೀಮನ ಬಲ, ವಿದುರನ ನೀತಿ, ಕೃಷ್ಣನ ತಂತ್ರ ಇರಬೇಕಂತೆ. ಆದರೆ ಇದರ ಜೊತೆಗೆ ಯಡಿಯೂರಪ್ಪ ಅವರ ಛಲಕ್ಕೆ ನಾನು ಅಭಿನಂದನೆ ಸಲ್ಲಿಸಲೇ ಬೇಕು ಎಂದು ಸಚಿವ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ವಿಶ್ವಾಸಮತದ ಮೇಲಿನ ಚರ್ಚೆಯ ವೇಳೆ ಪಕ್ಷಾಂತರಿಗಳ ನಿಷೇಧಕ್ಕೆ ಕಾನೂನು ತನ್ನಿ ಎಂದು ಹೇಳುತ್ತಾ ಸಚಿವರು ತಮ್ಮ ಮಾತಿನ ಮೂಲಕವೇ ಬಿಜೆಪಿ ರಾಜ್ಯಾಧ್ಯಕ್ಷರನ್ನು ತಿವಿದಿದ್ದಾರೆ. ಆರೇಳು ಬಾರಿ ಪ್ರಯತ್ನ ಪಟ್ಟರೂ ಆಗಿರಲಿಲ್ಲ. ಆದರೆ 8ನೇ ಬಾರಿ ನಮ್ಮ 15 ಶಾಸಕರು ಬಲೆಗೆ ತಗಲಾಕ್ಕೊಂಡಿದ್ದಾರೆ. ಇಂದು ಶ್ರದ್ಧಾಂಜಲಿ ಮಾಡುವ ದೊಡ್ಡ ಸಂದರ್ಭ ಬಂದಿದೆ. ಇವತ್ತು ಅಥವಾ ನಾಳೆ ನಿಮ್ಮ(ಸ್ಪೀಕರ್) ಸ್ಥಾನದಿಂದ ಮಾಡುತ್ತೀರೋ ಗೊತ್ತಿಲ್ಲ. ಪಾಪ ಅವರು ಮಂತ್ರಿ ಆಗ್ತೀನಿ ಎಂದು ಹೇಳುತ್ತಾರೆ. ಆದರೆ ಅವರು ಮಂತ್ರಿಯಾಗಲು ಹೇಗೆ ಸಾಧ್ಯ ಎಂದು ಸಭಾಧ್ಯಕ್ಷರನ್ನು ಡಿಕೆಶಿ ಪ್ರಶ್ನೆ ಮಾಡಿದರು. ಅಲ್ಲದೆ ಇದು ಹೇಗೆ ಸಾಧ್ಯವೆಂದು ನಂಗೂ ಗೊತ್ತಿಲ್ಲ ಎಂದರು.
Advertisement
ನಮಸ್ತೇ ಸದಾ ವತ್ಸಲೇ ಮಾತೃಭೂಮಿ.. ಅಲ್ಲಿಂದಲೇ ನನ್ನ ರಾಜಕಾರಣವೂ ಆರಂಭವಾಗಿದೆ. ಆದರೆ ಇದು ಈಗ ಚರ್ಚೆಗೆ ಬೇಡ. ಮುಂಬೈನಲ್ಲಿರುವ ನನ್ನ ಗೆಳೆಯರನ್ನು ಅತೃಪ್ತರು ಎಂದು ಕರೆಯಲು ನಾನು ತಯಾರಿಲ್ಲ. ಅವರು ತೃಪ್ತರು, ಅಂತೃಪ್ತರಾಗಿದ್ದಾರೆ. ಮುಂಬೈಗೆ ಹೋಗೋದು ಅಂದರೆ ನನಗೆ ತುಂಬಾ ಖುಷಿ. ಆತಿಥ್ಯಕ್ಕೆ ಮುಂಬೈ ಬಹಳ ಫೇಮಸ್ ಆಗಿದೆ. ಅಲ್ಲಿ ಶಾಸಕರು ತುಂಬಾ ಚೆನ್ನಾಗಿದ್ದಾರೆ ಇರಲಿ ಎಂದು ಹೇಳಿದರು.