ಶಿವಮೊಗ್ಗ: ಸಚಿವ ಡಿಕೆ ಶಿವಕುಮಾರ್ ಅವರು ನನಗೆ ಅಣ್ಣ ಇದ್ದಂತೆ. ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವಿಗೆ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ನನ್ನ ಅಣ್ಣನ ಸ್ಥಾನದಲ್ಲಿ ನಿಂತು ಸಚಿವ ಡಿ.ಕೆ ಶಿವಕುಮಾರ್ ಅವರು ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅಲ್ಲದೆ ಅವರು ಬರುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಈಗಾಗಲೇ ನಾನು ಅವರ ಬಳಿ ಮಾತನಾಡಿದ್ದೇನೆ. ಅವರು ಬರಲು ಒಪ್ಪಿದ್ದಾರೆ ಎಂದು ಹೇಳಿದ್ರು.
8 ಕ್ಷೇತ್ರಗಳಿಗೆ ನಾನು ಓಡಾಡುವುದಾದರೆ, ಇಲ್ಲಿ ಕುಳಿತು ಸಂಘಟನೆ ಮಾಡುವ ಕೆಲಸ ಹಾಗೂ ಚುನಾವಣಾ ತಂತ್ರವನ್ನು ಡಿಕೆಶಿ ಹೆಣೆಯಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಳ್ಳಾರಿ ರಣ ತಂತ್ರವನ್ನು ಬಳಸಲು ಸಿದ್ಧತೆ ನಡೆಸಿದ್ದು, ರಣತಂತ್ರದ ಸೂತ್ರಧಾರ ಡಿ.ಕೆ ಶಿವಕುಮಾರ್ ಹೆಗಲಿಗೆ ಜವಾಬ್ದಾರಿ ವಹಿಸಲಾಗಿದೆ. ಚುನಾವಣಾ ಕಣದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್ ಪಕ್ಷದ ಮಧು ಬಂಗಾರಪ್ಪ ಅವರು ಕಾಣಿಸಿಕೊಂಡಿದ್ದು, ಬಿಜೆಪಿಯ ಭದ್ರಕೋಟೆಯಾಗಿರುವ ಶಿವಮೊಗ್ಗ ಕ್ಷೇತ್ರವನ್ನು ದಕ್ಕಿಸಿಕೊಳ್ಳಲು ಡಿ.ಕೆ ಶಿವಕುಮಾರ್ ಸೂತ್ರಧಾರರಾಗಿದ್ದಾರೆ. ಪರಿಣಾಮ ಡಿ.ಕೆ ಶಿವಕುಮಾರ್ ಜಿಲ್ಲೆಯಲ್ಲೇ ನಿಂತು ಚುನಾವಣೆ ಮಾಡಲಿದ್ದು, ಇದು ಮಧು ಬಂಗಾರಪ್ಪ ಅವರ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ.