ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಮುಗಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಕುಟುಂಬಸ್ಥರು ವಿಶ್ರಾಂತಿಗಾಗಿ ಇಂದು ಎನ್.ಆರ್.ಪುರ ತಾಲೂಕಿನ ಕತ್ತಲೆ ಕಾನು ಎಸ್ಟೇಟ್‌ಗೆ ಚಿಕ್ಕಮಗಳೂರಿನಿಂದ (Chikkamgaluru) ತೆರಳಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ ಹೆಲಿಕಾಪ್ಟರ್ (Helicopter) ಇಂದು ಬೆಳಗ್ಗೆ ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ. ಕಾಲೇಜು ಆವರಣದಲ್ಲಿ ಲ್ಯಾಂಡ್ ಆಯ್ತು. ಈ ಹೆಲಿಕಾಪ್ಟರ್ ಮೂಲಕ ಪತ್ನಿ ಉಷಾ, ಪುತ್ರಿ ಐಶ್ವರ್ಯಾ, ಅಳಿಯ ಅಮರ್ಥ್ಯ ಅವರು ತೆರಳಿದರು.
ಡಿಕೆ ಶಿವಕುಮಾರ್ ಬುಧವಾರ ಬೆಳಗ್ಗೆಯೇ ನೇರವಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕೆಫೆ ಕಾಫಿ ಡೇ ಮಾಲಕ ಸಿದ್ಧಾರ್ಥ್ ಪುತ್ರ ಅಮರ್ಥ್ಯ ಒಡೆತನದಲ್ಲಿರುವ ಎಸ್ಟೇಟ್‌ಗೆ ತಲುಪಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಾರಿನಲ್ಲಿ ಚಿಕ್ಕಮಗಳೂರು ಹೊರವಲಯದಲ್ಲಿರುವ ಸೆರಾಯ್ ರೆಸಾರ್ಟ್‌ಗೆ ಆಗಮಿಸಿದ್ದರು.
ಹೆಲಿಕಾಪ್ಟರ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಐ.ಡಿ.ಎಸ್.ಜಿ. ಹೆಲಿಪ್ಯಾಡ್‌ನಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಹೆಲಿಪ್ಯಾಡ್‌ನಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಓರ್ವ ಡಿವೈಎಸ್ಪಿ, ಇಬ್ಬರು ಸಿಪಿಐ ಸೇರಿದಂತೆ ಬಿಗಿ ಭದ್ರತೆ ನೀಡಲಾಗಿತ್ತು.
ಚುನಾವಣೆ ಮುಗಿದ ಬಳಿಕ ಚಿಕ್ಕಮಗಳೂರು ಹೊರವಲಯದಲ್ಲಿರುವ ಸೆರಾಯ್ ರೆಸಾರ್ಟ್‌ಗೆ ಡಿಕೆ ಶಿವಕುಮಾರ್ ತಮ್ಮ ಕುಟುಂಬದ ಸದಸ್ಯರ ಜೊತೆ ಮಂಗಳವಾರ ಆಗಮಿಸಿದ್ದರು. ಇಂದು ಬೆಳಗ್ಗೆ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಮಾಜಿ ಪರಿಷತ್ ಸದಸ್ಯೆ ಗಾಯತ್ರಿ ಶಾಂತಗೌಡ ಮತ್ತು ಜಿಲ್ಲಾ ಘಟಕದ ಪ್ರಮುಖ ಮುಖಂಡರ ಜೊತೆ ಉಪಹಾರ ಸೇವಿಸುತ್ತಾ ಚರ್ಚೆ ನಡೆಸಿದರು.