ಬೆಂಗಳೂರು: ಹೊಸ ಸರ್ಕಾರದ ರಚನೆ ಮುನ್ನವೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಸಮ್ಮಿಶ್ರ ಸರ್ಕಾರದ ಡಿಸಿಎಂ ಹುದ್ದೆ ಸಿಗದ ಕಾರಣ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಹೈಕಮಾಂಡ್ ವಿರುದ್ಧ ಸಮಾಧಾನಗೊಂಡಿದ್ದಾರೆ.
ಆಪರೇಷನ್ ಕಮಲ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿಟ್ಟು ರಕ್ಷಿಸಿದ್ದ ಡಿಕೆ ಶಿವಕುಮಾರ್, ಪಕ್ಷ ಸಂಕಷ್ಟದಲ್ಲಿದ್ದ ಹಲವು ಸಂದರ್ಭದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದರು. ಇಷ್ಟು ದಿನ ಜವಾಬ್ದಾರಿ ಹೊತ್ತಿದ್ದ ಡಿಕೆ ಬ್ರದರ್ಸ್ ಸದ್ಯ ಶಾಸಕರು ತಂಗಿದ್ದ ಹೋಟೆಲ್ ಕಡೆ ಮುಖ ಮಾಡದೇ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿಯಿಂದ ಡಿಕೆ ಬ್ರದರ್ಸ್ ಹೋಟೆಲ್ ನತ್ತ ಮುಖ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿ ಎಚ್‍ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಆಗಮಿಸುತ್ತಿದ್ದರೂ ಶಾಸಕರು ತಂಗಿರುವ ಹಿಲ್ಟನ್ ಹೊಟೇಲ್ ನಲ್ಲಿ ಇಬ್ಬರು ಕಾಣಿಸಿಕೊಂಡಿಲ್ಲ.
ಸರ್ಕಾರ ರಚನೆ ವೇಳೆ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದರು. ಆದರೆ ಹೈಕಮಾಂಡ್ ಡಿಸಿಎಂ ಸ್ಥಾನಕ್ಕೆ ಪರಮೇಶ್ವರ್ ಅವರನ್ನು ನೇಮಕ ಮಾಡಿ ಅಂತಿಮಗೊಳಿಸಿದ್ದರಿಂದ ಯಾವ ಜವಾಬ್ದಾರಿ ಸಹ ಬೇಡ ಎಂದು ಶಾಸಕರೊಂದಿಗೆ ಹಾಗೂ ಹಿರಿಯ ಮುಖಂಡರೊಂದಿಗೆ ರೇಗಾಡಿ ಹೊಟೇಲ್ ನಿಂದ ತೆರಳಿದ್ದರು ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
ಅರಂಭದಿಂದಲೂ ಆಪರೇಷನ್ ಕಮಲದ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ಸನ್ನು ರಕ್ಷಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆ ಶಿವಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದರು. ಬಿಜೆಪಿ ಕೈ ಶಾಸಕರನ್ನು ಸೆಳೆಯಲು ಮುಂದಾಗುತ್ತಿದೆ ಎನ್ನುವ ಸುಳಿವು ಸಿಕ್ಕ ಕೂಡಲೇ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಸರ್ಕಾರ ವಾಪಸ್ ಪಡೆದ ಬಳಿಕ ಇಲ್ಲೂ ಶಾಸಕರನ್ನು ಸೆಳೆಯಬಹುದು ಎನ್ನುವ ಭೀತಿಯಿಂದ ಎಲ್ಲರನ್ನೂ ಹೈದರಾಬಾದ್‍ಗೆ ಡಿಕೆಶಿ ಕರೆದುಕೊಂಡು ಹೋಗಿದ್ದರು.
ಈ ನಡುವೆ ಕರ್ನಾಟಕ ರಾಜಕೀಯದಲ್ಲಿ ನಡೆದ ಸಂಪೂರ್ಣ ಬೆಳವಣಿಗೆಯಲ್ಲೂ ಡಿಕೆಶಿ ಬಹಳ ಮುಖ್ಯ ಪಾತ್ರವಹಿಸಿದ್ದರು. ಅಲ್ಲದೇ ಬಿಎಸ್‍ವೈ ಪ್ರಮಾಣ ಸ್ವೀಕರ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಹುಡುಕಾಟ ನಡೆದಿತ್ತು. ಹೋಟೆಲ್ ನಲ್ಲಿ ಪತ್ತೆಯಾದ ವಿಚಾರ ತಿಳಿದ ಡಿಕೆಶಿ ಅಂದು ಸುಮಾರು ಒಂದು ಗಂಟೆ ವಿಧಾನಸೌಧದ ಹೊರಗಡೆಯೇ ಶಾಸಕರಿಗೆ ಕಾದಿದ್ದರು. ಪ್ರತಾಪ್ ಗೌಡ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅವರ ಶರ್ಟ್ ಕಿಸೆಗೆ ಡಿಕೆಶಿ ವಿಪ್ ಹಾಕಿದ್ದರು. ಬಳ್ಳಾರಿಯ ವಿಜಯನಗರ ಶಾಸಕರ ಆನಂದ್ ಸಿಂಗ್ ಅವರನ್ನು ಡಿಕೆಶಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದರು.
ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಹೈ ಕಮಾಂಡ್ ಗೆ ಮೆಚ್ಚುಗೆ ಆಗಿತ್ತು. ಹೀಗಾಗಿ ಡಿಕೆಶಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾತು ಕಾಂಗ್ರೆಸ್ ವಲಯದಿಂದ ಕೇಳಿಬಂದಿತ್ತು.