ಬೆಂಗಳೂರು: ಈ ರಾಜ್ಯದಲ್ಲಿ ಡಿಜಿಪಿ ಬದುಕಿದ್ದಾರೆ ಅಂದರೆ ಈಶ್ವರಪ್ಪನವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ನಗರದ ಕೆಪಿಸಿಸಿ ಕಛೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು, ಮುಖ್ಯಮಂತ್ರಿ ಏನೂ ಮಾಡಲ್ಲ. ಈ ರಾಜ್ಯದಲ್ಲಿ ಡಿಜಿಪಿ ಬದುಕಿದ್ದಾರೆ ಅಂದರೆ ಕ್ರಮ ಕೈಗೊಳ್ಳಬೇಕು. ಅವರು ಈ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇದರಲ್ಲಿ ಸತ್ಯ ಇದೆಯೋ ಇಲ್ಲವೋ ಗೊತ್ತಿಲ್ಲ. ಮೊದಲು ಎಫ್‍ಐಆರ್ ದಾಖಲಿಸಬೇಕು. ಎಫ್‍ಐಆರ್ ಆಧಾರದ ಮೇಲೆ ತನಿಖೆ ಕೈಗೊಳ್ಳಬೇಕು. ಡೆತ್ ನೋಟ್ ಬಂದಾಗ ಎಫ್‍ಐಆರ್ ದಾಖಲಿಸುತ್ತಾರೆ. ಇಂತಹ ಕೇಸ್ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ಹಾಗಾಗಿ ಪೊಲೀಸರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಬೇರೆ, ತನಿಖೆ ಮಾಡುವವರು ಬೇರೆ. ಅನೇಕ ಕೇಸ್‍ಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸಿದೆ. ಮಧ್ಯಪ್ರವೇಶ ಮಾಡಿ ಅವರನ್ನು ರಕ್ಷಿಸಿದೆ. ಮಂತ್ರಿಗಳ ಕೇಸ್‍ನಲ್ಲಿ ಅವರನ್ನು ರಕ್ಷಣೆ ಮಾಡಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40 ಪರ್ಸೆಂಟೇಜ್ ಆರೋಪ ಮಾಡಿದ್ದ ಬೆಳಗಾವಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ಇಂದು ವಾಟ್ಸಪ್ ಸಂದೇಶ ರವಾನಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಓಲೈಕೆ ರಾಜಕಾರಣ ಗೊತ್ತಿಲ್ಲ: ಇಬ್ಬರು ಮಾಜಿ ಸಿಎಂಗಳಿಗೆ ಕುಟುಕಿದ ಬೊಮ್ಮಾಯಿ
ವಾಟ್ಸಾಪ್ ಸಂದೇಶದಲ್ಲಿ ನನ್ನ ಸಾವಿಗೆ ನೇರ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ. ಕರ್ನಾಟಕ ಸರ್ಕಾರದಿಂದ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಹಾಗೆ ಅವರಿವರೆನ್ನದೇ ಎಲ್ಲರು ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.