ರಾಮನಗರ: ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಲು ಡಿಕೆ ಸಹೋದರರು ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗಿಶ್ವರ್ ವ್ಯಂಗ್ಯವಾಡಿದ್ದಾರೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಜಿಲ್ಲೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಅವರು, ಪತ್ರಿಕಾಗೋಷ್ಠಿ ನಡೆಸಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಹಾಗೂ ಡಿಕೆ ಬ್ರದರ್ಸ್ ವಿರುದ್ದ ಹರಿಹಾಯ್ದರು. ಅನಿತಾ ಕುಮಾರಸ್ವಾಮಿಯವರು ನೂರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಜಿಲ್ಲೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಬೇಕು ಅಂದರೆ, ಅವರು ದುಡ್ಡು ತೆಗೆದುಕೊಳ್ಳದೇ ಏನು ಮಾಡುತ್ತಿಲ್ಲ. ಇದರಲ್ಲಿ ಎಸಿ, ಡಿಸಿ, ತಹಶೀಲ್ದಾರರು ಸಹ ವರ್ಗಾವಣೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂದು ಜಿಲ್ಲೆಯ ಜನ ಹಾಗೂ ಜೆಡಿಎಸ್ಸಿನ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಡಿಕೆ ಸಹೋದರರು ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಲು ಟೊಂಕ ಕಟ್ಟಿ, ಹಠಕ್ಕೆ ಬಿದ್ದಿದ್ದಾರೆ. ಕೇವಲ ಅಧಿಕಾರದ ಆಸೆಯಿಂದ ಇಷ್ಟು ದಿನ ಕಿತ್ತಾಡಿಕೊಂಡಿದ್ದ ಅವರು ಇಂದು ಒಂದಾಗಿದ್ದಾರೆ. ಆದರೆ ಈ ಬಾರಿ ರಾಮನಗರ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅನಿತಾ ಕುಮಾರಸ್ವಾಮಿ ಎಲ್ಲೇ ಪ್ರಚಾರಕ್ಕೆ ಹೋದರೂ, ಗ್ರಾಮಸ್ಥರು ಪ್ರತಿಭಟನೆ ಮಾಡಲು ಮೂಲಕ ಅವರನ್ನು ವಾಪಾಸ್ ಕಳುಹಿಸುತ್ತಿದ್ದಾರೆ. ತಾಲೂಕಿನಾದ್ಯಂತ ಅನಿತಾರ ವಿರುದ್ಧವಾದ ಮಾತುಗಳು ಕೇಳಿಬರುತ್ತಿವೆ ಎಂದು ಹೇಳಿದರು.
ಈ ಹಿಂದೆ ಮಧುಗಿರಿಯಲ್ಲಿ ಶಾಸಕಿಯಾಗಿದ್ದಾಗ ಅವರು ಕ್ಷೇತ್ರಕ್ಕೆ ಬರಲಿಲ್ಲ ಎಂದು ಅಲ್ಲಿಂದ ವಾಪಾಸ್ ಕಳುಹಿಸಿದ್ದರು. ಅಲ್ಲದೇ ಚನ್ನಪಟ್ಟಣದ ಜನರು ಕೂಡಾ ಅನಿತಾರನ್ನು ಸ್ವೀಕರಿಸಲಿಲ್ಲ. ಶಾಸಕಿ ಸ್ಥಾನ ಅವರಿಗೆ ಹೆಸರಿಗೋಸ್ಕರ ಬೇಕು. ಹಠಕ್ಕೆ ಬಿದ್ದಂತೆ ರಾಮನಗರದಲ್ಲಿ ತಮ್ಮ ಪತಿಯವರ ಸ್ಥಾನವನ್ನ ಖಾಲಿ ಮಾಡಿಸಿ, ಚುನಾವಣೆಗೆ ಬಂದಿದ್ದಾರೆ. ಇದು ಬಲವಂತದ ಚುನಾವಣೆಯಾಗಿದೆ ಎಂದು ಕಿಡಿಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv